ಬೆಂಗಳೂರು : ರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ತೀವ್ರ ಬರಗಾಲವನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಹಾಗೂ ಸಿಇಓ ಗಳೊಂದಿಗೆ ವೀಡಿಯೊ ಸಂವಾದ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅನಿವಾರ್ಯವಾದಾಗ ಮಾತ್ರ ಹೊಸ ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಹೆಚ್ಚುವರಿಯಾಗಿ 140 ಕೋಟಿ ರೂ.ಗಳ ಜೊತೆಗೆ 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು.ಇದು ಸರ್ಕಾರದಿಂದ ನೀಡುವ ಅನುದಾನವಾಗಿದೆ ಎಂದರು.

ಕರ್ನಾಟಕದಲ್ಲಿ ಈ ವರ್ಷ ಬರಗಾಲವಿದ್ದು, 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದು, 194 ತೀವ್ರ ಬರಗಾಲ ಪೀಡಿತವಾಗಿವೆ.
ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಲಭ್ಯವಿದೆ.

ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆದು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಈವರೆಗೆ 646 ಸಭೆಗಳನ್ನು ಇಲ್ಲಿಯವರೆಗೆ ನಡೆಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಿದೆ ಎಂದರು.

ಸಮಸ್ಯೆಯಿರುವ ಗ್ರಾಮ, ಜಿಲ್ಲೆಗಳಲ್ಲಿ ಅದಕ್ಕೆ ಮುಂಚಿತವಾಗಿ ಯೋಜನೆ ತಯಾರಿಸಬೇಕು. ಸದ್ಯ 98 ತಾಲ್ಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 204 ಟ್ಯಾಂಕರ್ ಗಳಿಂದ 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದು ವಿವರಿಸಿದರು.

120 ಬಿಬಿಎಂಪಿ ಹಾಗೂ ಜಲಮಂಡಲಿಯಲ್ಲಿ 232 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಆಗುತ್ತಿದೆ. 96 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದರು.

ಕೆಲವೆಡೆ ಸರ್ಕಾರದ ಕೊಳವೆಬಾವಿಗಳನ್ನು ಆಳ ಮಾಡುವುದು, ಫ್ಲ್ಯಾಶಿಂಗ್ ಮಾಡುವುದು, ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯುವುದು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಿದೆ ಎಂದರು.

*ಪರಿಹಾರ*
ಇಂದಿನವರೆಗೆ 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ.

ಸರ್ಕಾರ 600 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಒದಗಿಸಲಾಗಿದೆ. ಇನ್ನೂ 800 ಕೋಟಿ ರೂ.ಗಳನ್ನು ಪಾವತಿಯಾಗುವ ನಿರೀಕ್ಷೆ ಇದೆ.

ಮೇವಿಗೆ ಈವರೆಗೆ ತೊಂದರೆ ಇಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಪಶುಸಂಗೋಪನೆ ಇಲಾಖೆಗೆ 40 ಕೋಟಿ ರೂ.ಗಳನ್ನು ಮೇವು ಬೆಳೆಯಲು ಒದಗಿಸಲಾಗಿದೆ.

ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿ.ಕುಟುಂಬಕ್ಕೆ 4- 5 ಸಾವಿರ ರೂ. 1.ಕೋಟಿ 20.ಲಕ್ಷ ಕುಟುಂಬ ಗಳಿಗೆ 4.50 ಕೋಟಿ ಜನರೊಗೆ ಇದರ ಲಾಭ ದೊರೆತಿದೆ. ಈ ಕಾರಣದಿಂದ ಜನ ಗುಳೇ ಹೋಗುತ್ತಿಲ್ಲ ಎಂದರು.

ಸುಮಾರು 7408 ಹಳ್ಳಿಗಳಲ್ಲಿ , 1115 ವಾರ್ಡುಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೂ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಸಿದ್ಧವಾಗಿದೆ. ಖಾಸಗಿ ಕೊಳವೆಬಾವಿಗಳೊಂದಿಗೆ ಒಪ್ಪಂದವಾಗಿದೆ. ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಬರಗಾಲ ಬಂದರೆ 150 ದಿನಗಳಿಗೆ ಮಾನವ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಹೆಚ್ಚಿಸಿಲ್ಲ. ನರೇಗಾ ಯೋಜನೆಯಡಿ ಕೆಲಸದ ಹಣ ಪಾವತಿಯನ್ನೂ ಮಾಡಿಲ್ಲ ಎಂದರು.

18, 172 ಕೋಟಿ ರೂ.ಗಳ ಪರಿಹಾರ ಕೋರಿದ್ದರೂ ಒಂದು ಬಿಡಿಗಾಸು ಸಹ ಕೇಂದ್ರ ಸರ್ಕಾರ ನೀಡಿಲ್ಲ.

ಬಿಜೆಪಿ ನೇತೃತ್ವದಲ್ಲಿಯೇ ನಿಯೋಗ ಹೋಗೋಣವೆಂದರೆ ಬಿಜೆಪಿ ನಾಯಕರ ಉತ್ತರವಿಲ್ಲ. ಕೇಂದ್ರ ಸರ್ಕಾರ ಜಪ್ಪಯ್ಯ ಅಂದರೂ ಒಂದು ರೂ.ನೀಡಿಲ್ಲ. ಪರಿಹಾರ ನೀಡಿಲ್ಲ ಎನ್ನಲೂ ನಮಗೆ ಸ್ವಾತಂತ್ರ್ಯವಿಲ್ಲವೇ? ಎಂದರು.

ಅಧಿಕಾರಿಗಳು ವಾಚಕರ ವಾಣಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿಯನ್ನು ಕಟ್ಟುನಿಟ್ಟಾಗಿ ಗಮನಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸಹಾಯವಾಣಿ ಹಾಗೂ ಕಂಟ್ರೋಲ್ ರೂಮ್ ನ್ನು ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ. ಹಣಕ್ಕೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಟ್ಯಾಂಕರ್ ಮಾಲೀಕರು ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೂ ನೋಂದಣಿ ಮಾಡಿಸಿಕೊಂಡು ದರಗಳನ್ನು ನಿಯಂತ್ರಣ ಮಾಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಇಂದು ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಮುಖ್ಯಾಂಶಗಳು*

.Ø ಫೆಬ್ರುವರಿಯಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗುತ್ತಿದೆ. ಸಮಸ್ಯೆ ಹತೋಟಿ ಮೀರುವ ಮೊದಲೇ ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಲಾಯಿತು.

Ø ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆ ಉಂಟಾಗಿದ್ದು, ಈಗ ಪೂರ್ವ ಮುಂಗಾರು ಅವಧಿಯಲ್ಲಿ 9 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ವಾಡಿಕೆ ಮಳೆಯ ನಿರೀಕ್ಷೆ ಇದೆ.

Ø ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದ್ದು, ತಾಪಮಾನವು ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ.

Ø ಕೇಂದ್ರ ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿ 33.25 ಲಕ್ಷ ರೈತರಿಗೆ ರೂ. 631.13 ಕೋಟಿ ಬಿಡುಗಡೆ ಮಾಡಲಾಗಿದೆ. ಇದರ ವಿವರವನ್ನು ರೈತ ಸಂಪರ್ಕ ಕೇಂದ್ರ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕಟಿಸಲಾಗಿದೆ.

Ø 8 ಜಿಲ್ಲೆಗಳ 20 ನಗರ ಪ್ರದೇಶಗಳಲ್ಲಿ 96 ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 29 ವಾರ್ಡ್ಗಳಲ್ಲಿ ಖಾಸಗಿ ಬೋರ್ ವೆಲ್ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

Ø ಜನವರಿವರೆಗೆ ನೀರಿನ ಸಮಸ್ಯೆ ಉಲ್ಬಣವಾಗಿರಲಿಲ್ಲ. ಈಗಲೂ ಸಮಸ್ಯೆ ನಿಯಂತ್ರಣದಲ್ಲಿದ್ದು, 7340 ಬಾಡಿಗೆ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ಅಂದಾಜು ಮಾಡಲು ಸೂಚಿಸಲಾಯಿತು.

Ø 7408 ಗ್ರಾಮಗಳಲ್ಲಿ ಸಮಸ್ಯೆ ಉದ್ಭವಿಸಬಹುದು. ಪರಿಹಾರವಾಗಿ 7340 ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 675 ಗ್ರಾಮಗಳಲ್ಲಿ ಈಗಾಗಲೇ ಸಮಸ್ಯೆ ಇದೆ. 500 ಕೊಳವೆಬಾವಿಗಳಿಂದ ನೀರು ಬಾಡಿಗೆಗೆ ಪಡೆದಿದೆ ಎಂದು ಸಭೆಗೆ ಕಂದಾಯ ಸಚಿವರು ಮಾಹಿತಿ ನೀಡಿದರು.

Ø ಸದ್ಯಕ್ಕೆ ಮೇವಿನ ಅಭಾವ ಅಷ್ಟಾಗಿ ಎದುರಾಗಿಲ್ಲ. ಚಿತ್ರದುರ್ಗದಲ್ಲಿ ಮಾತ್ರ ಸಮಸ್ಯೆ ಕಂಡುಬಂದಿದ್ದು, ಈಗಾಗಲೇ ಮೂರು ಗೋ-ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಸಮಸ್ಯೆ ಇದ್ದರೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿಯಾದರೂ ಕ್ರಮ ವಹಿಸಲು ಸೂಚಿಸಲಾಗಿದೆ. ಮೇವು ಖರೀದಿಗೆ ಮುಂಚಿತವಾಗಿಯೇ ಟೆಂಡರ್ ಕರೆಯಲಾಗಿದೆ.

Ø ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಮಾತ್ರ ನೀರಿನ ಮಟ್ಟ ಕಡಿಮೆಯಾಗಿದೆ. ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿರುವವರಿಗೆ ನೀರಿನ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಗಾರು ಸರಿಯಾದ ಸಮಯಕ್ಕೆ ಪ್ರಾರಂಭವಾಗುವ ಬಗ್ಗೆ ಅಂದಾಜಿಸಲಾಗಿದೆ. ಆದರೂ ಜೂನ್ ಅಂತ್ಯದವರೆಗೆ ರಿಸ್ಕ್ ಎಂದು ಪರಿಗಣಿಸಿಯೇ ಕಾರ್ಯನಿರ್ವಹಿಸಬೇಕಿದೆ.

Ø 1.78 ಟಿಎಂಸಿ ನೀರು ತುಂಗಭದ್ರಾದಲ್ಲಿ ಲಭ್ಯವಿದ್ದು ಜೂನ್ ಅಂತ್ಯದವರೆಗೆ ಇದರಲ್ಲಿಯೇ ನಿರ್ವಹಣೆ ಮಾಡಬೇಕಿದೆ. ವಾರಕ್ಕೊಮ್ಮೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ನಾರಾಯಣಪುರ, ಆಲಮಟ್ಟಿ, ಮಲಪ್ರಭಾ, ಘಟಪ್ರಭಾ, ಕಾವೇರಿ ಕಣಿವೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.

Ø ನರೇಗಾದಡಿ ರಾಜ್ಯಕ್ಕೆ ನೀಡಿದ್ದ ಮಾನವ ದಿನಗಳು ಸಂಪೂರ್ಣಗೊಂಡಿದೆ. ಕೇಂದ್ರ ಸರ್ಕಾರದಿಮದ 730 ಕೋಟಿ ರೂ.ಗಳು ಬರಬೇಕಿದ್ದು, ಇನ್ನೂ ಬಿಡುಗಡೆಯಾಗಿಲ್ಲ. 1400 ಕೋಟಿ ಕೆಲಸ ನಿರ್ವಹಿಸಿದ ಮೊತ್ತ ಬರಬೇಕಿದೆ. 4.74 ಕುಟುಂಬಗಳು ನೂರು ದಿನಗಳ ಕೆಲಸ ಮಾಡಿದ್ದು ಅವರಿಗೆ ಈಗ ಉದ್ಯೋಗ ದೊರೆಯದ ಕಾರಣ ಗುಳೆ ಹೋಗುವ ಸಂದರ್ಭ ಒದಗಿ ಬರಬಹುದು ಎಂದು ಕಂದಾಯ ಸಚಿವರು ತಿಳಿಸಿದರು.

*ಗ್ಯಾರಂಟಿ ಯೋಜನೆಗಳಿಂದ ಗುಳೇ ಹೋಗುವುದು ಕಡಿಮೆಯಾಗಿದೆ*

Ø ಗ್ಯಾರಂಟಿ ಯೋಜನೆಗಳಿಂದಾಗಿ ಗುಳೆ ಹೋಗುವುದು ಕಡಿಮೆಯಾಗಿದೆ. ಇಲ್ಲದಿದ್ದರೆ ಗುಳೇ ಹೋಗುವುದು ವ್ಯಾಪಕವಾಗಿ ಆಗುತ್ತಿತ್ತು .

Ø 24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಪ್ರಥಮ ಆದ್ಯತೆ ನೀಡಬೇಕು. ನಂತರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಲು ಆದ್ಯತೆ ನೀಡಲು ಸೂಚಿಸಲಾಯಿತು.

Ø ಎಸ್.ಡಿ.ಆರ್.ಎಫ್.ನಡಿ ಕೊಳವೆಬಾವಿ ದುರಸ್ತಿಗೆ ಅನುದಾನ ಲಭ್ಯವಿದೆ. ಅನಿವಾರ್ಯ ಸಂದರ್ಭದಲ್ಲಿ ಕೊಳವೆಬಾವಿ ಕೊರೆಸಲು ಅವಕಾಶವಿದೆ. ಟ್ಯಾಂಕರ್ ಗೆ ಮುಮಚಿತವಾಗಿಯೇ ಟೆಂಡರ್ ಕರೆದು ಸಿದ್ದವಾಗಿರಬೇಕು ಎಂದು ಈಗಾಗಲೇ ಸೂಚಿಸಲಾಗಿದೆ.

Ø ಸಿಇಒ, ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಟೆಂಡರ್ ಕರೆಯಬೇಕು. ಒಂದು ವಾರದೊಳಗೆ ಟ್ಯಾಂಕರ್ ಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಲಾಯಿತು.

Ø ಎಲ್ಲಾ ಜಿಲ್ಲೆಗಳಿಗೆ ಕೊಳವೆ ಬಾವಿಗಳ ದುರಸ್ತಿ 46.90 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

Ø ನೀರಿನ ಸಮಸ್ಯೆಯಿರುವ ರಾಯಚೂರು, ಹಾವೇರಿ, ಹಾಸನ, ವಿಜಯಪುರ, ವಿಜಯನಗರ ಜಿಲ್ಲೆಗಳ ಬೆಂಗಳೂರು ನಗರ, ಗ್ರಾಮೀಣ ಜಿಲ್ಲೆಗಳ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಆಲಿಸಿದರು.

Ø ವಿಜಯನಗರ, ಕೊಪ್ಪಳ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಲಾಶಯಗಳ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

Ø ವಿಜಯನಗರ ಜಿಲ್ಲೆ ಮೂರು ಪಟ್ಟಣಗಳು ಹಾಗೂ 40 ಪಂಚಾಯಿತಿಗಳಿಗೆ ನೀರು ಪೂರೈಕೆಗೆ 0.1 ಟಿಎಂಸಿ ನೀರು ಬಿಡುಗಡೆ ಮಾಡುವ ಕುರಿತು ಕ್ರಮ ವಹಿಸುವಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

Ø ಹಾವೇರಿ ಜಿಲ್ಲೆಯ ನಗರ ನೀರು ಸಮಸ್ಯೆ ಬಗೆಹರಿಸಲು ಕೆ.ಯು.ಐ.ಡಿ.ಎಫ್ ನಿಂದ ಹಣ ಬಳಕೆ ಮಾಡಲು ಸೂಚಿಸಲಾಯಿತು.

Ø ಹಾಸನದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳಿಗೆ ಯೋಜನೆ ಹಾಕಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

Ø ಬೆಂಗಳೂರು ನಗರ ಹಾಗೂ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬೆಂಗಳೂರು ನಗರದಲ್ಲಿ 11,000 ಕೊಳವೆಬಾವಿಗಳಲ್ಲಿ 6,000 ಕೊಳವೆ ಬಾವಿಗಳು ವಿಫಲವಾಗಿವೆ.

Ø ಎಲ್ಲಾ ಟ್ಯಾಂಕರುಗಳನ್ನು ನೋಂದಾಯಿಸಲು ಸೂಚಿಸಲಾಗಿದೆ. ಬೆಂಗಳೂರು ನಗರಕ್ಕೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಬಿಬಿಎಂಪಿ ವತಿಯಿಂದ ಬೋರ್ವೆಲ್ ನೀರು ಒದಗಿಸಲಾಗುತ್ತಿದೆ.

 

Ø ಕಾವೇರಿ ಐದನೇ ಹಂತದ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಹಾಗೂ ಪ್ರಕಟವಾಗುವ ಕುಡಿಯುವ ನೀರಿನ ಸಮಸ್ಯೆ ಕುರಿತ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಿದರು.

 

Ø ಖಾಸಗಿ ಬೋರ್ವೆಲ್ಗಳನ್ನು ವಶಕ್ಕೆ ಪಡೆದುಕೊಂಡು ನೀರು ಪೂರೈಸಲು ಕ್ರಮಕೈಗೊಳ್ಳಲು ಸೂಚಿಸಿದರು. ಎಸ್.ಡಿ.ಆರ್.ಎಫ್. ಮೂಲಕ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

 

Ø ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಮಾಡುವಂತೆ ಸೂಚಿಸಲಾಯಿತು.