ತಿರುಪತಿ : ತಿರುಪತಿ ದೇವಸ್ಥಾನದ ಬಳಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಜನದಟ್ಟಣೆ ಮತ್ತು ಅನಿಯಂತ್ರಿತ ಟೋಕನ್ ವಿತರಣೆಯು ಮಾರಣಾಂತಿಕ ತಿರುಪತಿ ಕಾಲ್ತುಳಿತ ಘಟನೆಗೆ ಕಾರಣಗಳೆಂದು ಚರ್ಚಿಸಲಾಗುತ್ತಿದೆ.
ತಿರುಮಲ ಶ್ರೀವಾರಿ ವೈಕುಂಠ ದ್ವಾರ ಟಿಕೆಟ್ ಕೌಂಟರ್ ಬಳಿಯ ವಿಷ್ಣು ನಿವಾಸದ ಬಳಿ ದರ್ಶನ ಟೋಕನ್ ವಿತರಣೆ ವೇಳೆ ಈ ಘಟನೆ ನಡೆದಿದೆ. ವಿಷ್ಣು ನಿವಾಸ, ಶ್ರೀನಿವಾಸಂ ಮತ್ತು ಪದ್ಮಾವತಿ ಪಾರ್ಕ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಅಧಿಕಾರಿಗಳು ಟೋಕನ್ ವಿತರಿಸಲು ಪ್ರಾರಂಭಿಸಿದ ರಾತ್ರಿ 8 ಗಂಟೆಗೆ ಘಟನೆ ವರದಿಯಾಗಿದೆ. ಅಸ್ವಸ್ಥರಾದ ಭಕ್ತರೊಬ್ಬರು ಸರತಿ ಸಾಲಿನಿಂದ ಹೊರ ಬರಲು ಸಹಾಯ ಮಾಡಲು ಗೇಟ್‌ಗಳನ್ನು ತೆರೆಯುತ್ತಿದ್ದಂತೆ ಜನದಟ್ಟಣೆ ಹೆಚ್ಚಾದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ.
ಗೇಟ್‌ಗಳು ತೆರೆದ ತಕ್ಷಣ, ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ನುಗ್ಗಿದ್ದರಿಂದ ತೀವ್ರ ದಟ್ಟಣೆ ಉಂಟಾಯಿತು. ಗುಂಪು ನಿರ್ವಹಣೆ ಮಾಡಲು ಸಾಧ್ಯವಾಗದ ಎರಡು ಸ್ಥಳಗಳಲ್ಲಿ ಕಾಲ್ತುಳಿತಕ್ಕೆ ಕಾರಣವಾಯಿತು.
ಜನವರಿ 10 ರಂದು (ಏಕಾದಶಿ) ನಿಗದಿಪಡಿಸಲಾದ ವೈಕುಂಠದ್ವಾರ ದರ್ಶನಕ್ಕಾಗಿ 1.2 ಲಕ್ಷ ಟೋಕನ್‌ಗಳನ್ನು ವಿತರಿಸುವುದಾಗಿ ಟಿಟಿಡಿ ಪ್ರಕಟಿಸಿತ್ತು ಮತ್ತು 94 ಕೌಂಟರ್‌ಗಳ ಮೂಲಕ ಒಂಬತ್ತು ಕೇಂದ್ರಗಳಲ್ಲಿ ಟೋಕನ್‌ಗಳನ್ನು ವಿತರಿಸಬೇಕಾಗಿತ್ತು, ಆದರೆ ಹಠಾತ್ ಜನಸಂದಣಿ ಹೆಚ್ಚಿದ್ದರಿಂದ ಇಡೀ ಪ್ರಕ್ರಿಯೆ ನಿಯಂತ್ರಣ ತಪ್ಪಿತು.ತಿರುಪತಿ ಕಾಲ್ತುಳಿತ: ಏನಾಯ್ತು?
ದೇವಾಲಯದ ಕಾರ್ಯಾಚರಣೆಯನ್ನು ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ವೈಕುಂಠ ಏಕಾದಶಿ ದರ್ಶನ ಟೋಕನ್‌ಗಳನ್ನು ವಿತರಿಸಲು ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಿತ್ತು. 10 ದಿನಗಳ ಉತ್ಸವದ ದರ್ಶನ ಟೋಕನ್‌ಗಳನ್ನು ಗುರುವಾರ ಬೆಳಿಗ್ಗೆ 5 ಗಂಟೆಯಿಂದ ವಿತರಿಸಬೇಕಾಗಿತ್ತು, ಆದರೆ ದೇವಾಲಯದ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಸ್ಥಾಪಿಸಿದ ಕೌಂಟರ್‌ಗಳಲ್ಲಿ ಹಿಂದಿನ ದಿನವಾದ ಬುಧವಾರ ಸಂಜೆಯಿಂದಲೇ ಸಾವಿರಾರು ಜನರು ಜಮಾಯಿಸಿದರು.
ವೆಂಕಟೇಶ್ವರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸುವ ಈ ಟೋಕನ್‌ಗಳನ್ನು ತಿರುಪತಿಯ ವಿಷ್ಣು ನಿವಾಸ ದೇವಸ್ಥಾನದ ಬಳಿ ಇರುವ ಬೈರಾಗಿಪಟ್ಟೇಡಾದ ಎಂಜಿಎಂ ಪ್ರೌಢಶಾಲೆಯಲ್ಲಿ ವಿತರಿಸಲಾಗುತ್ತಿದೆ.ಬುಧವಾರ ಬೆಳಗ್ಗೆಯಿಂದಲೇ ಕೌಂಟರ್‌ಗಳಲ್ಲಿ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದು, ಸಂಜೆಯ ವೇಳೆಗೆ ನೂಕುನುಗ್ಗಲು ಉಂಟಾಗಿ ಜನಸಂದಣಿ ವಿಕೋಪಕ್ಕೆ ಹೋಯಿತು.
ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಅವರ ಪ್ರಕಾರ, ಮಹಿಳೆಯೊಬ್ಬರು ಅಸ್ವಸ್ಥಗೊಂಡಾಗ ಸಹಾಯ ಮಾಡಲು ಗೇಟ್ ತೆರೆದಾಗ ಕಾಲ್ತುಳಿತ ಸಂಭವಿಸಿದೆ, ಜನಸಮೂಹವು ಒಂದೇ ಬಾರಿಗೆ ಮುಂದಕ್ಕೆ ನುಗ್ಗಿತು, ಇದು ಅವ್ಯವಸ್ಥೆಗೆ ಕಾರಣವಾಯಿತು ಎಂದು ವರದಿ ಹೇಳಿದೆ.1,20,000 ಟೋಕನ್‌ಗಳ ವಿತರಣೆಗೆ ವ್ಯವಸ್ಥೆ
ಜನವರಿ 10 ರಿಂದ 12 ರವರೆಗೆ ವಾರ್ಷಿಕ ದರ್ಶನದ ಮೊದಲ ಮೂರು ದಿನಗಳವರೆಗೆ ವೆಂಕಟೇಶ್ವರ ಸ್ವಾಮಿಯ “ಸರ್ವ ದರ್ಶನ” (ಉಚಿತ ದರ್ಶನ)ಕ್ಕಾಗಿ ಭಕ್ತರಿಗೆ 120,000 ಟೋಕನ್‌ಗಳನ್ನು ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿಯ ಸತ್ಯನಾರಾಯಣಪುರಂ, ಬೈರಾಗಿಪಟ್ಟೇಡ ಮತ್ತು ರಾಮನಾಯ್ಡು ಶಾಲೆಗಳಲ್ಲದೆ ವಿಷ್ಣು ನಿವಾಸ, ಶ್ರೀನಿವಾಸಂ ಮತ್ತು ಭೂದೇವಿ ಸಂಕೀರ್ಣಗಳಲ್ಲಿ ಮೂರು ಯಾತ್ರಿ ನಿವಾಸಗಳಲ್ಲಿ 94 ಕೌಂಟರ್‌ಗಳಲ್ಲಿ ವಿತರಣಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾರ್ಷಿಕ ತೀರ್ಥಯಾತ್ರೆಯ ಟೋಕನ್‌ಗಳನ್ನು ಪಡೆಯಲು ಶ್ರೀನಿವಾಸಮ್‌ನಲ್ಲಿ ಗೊಂದಲ ಉಂಟಾಗಿದೆ. “ಇದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು, ಏಕೆಂದರೆ ಯಾತ್ರಿಕರು ಟೋಕನ್‌ಗಳನ್ನು ಪಡೆಯಲು ಕೌಂಟರ್‌ಗಳ ಕಡೆಗೆ ನುಗ್ಗಿದರು” ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನದಟ್ಟಣೆ ಕಾಲ್ತುಳಿತಕ್ಕೆ ಕಾರಣ- ಟಿಟಿಡಿ
ಈ ಮಧ್ಯೆ, ತಿರುಪತಿಯಲ್ಲಿ ಕಾಲ್ತುಳಿತವು ಆರು ಜೀವಗಳ ಸಾವಿಗೆ ಕಾರಣವಾಯಿತು ಎಂದು ತಿರುಮಲ ತಿರುಪತಿ ದೇವಸ್ತಾನಮ್ಸ್ (ಟಿಟಿಡಿ) ಅಧ್ಯಕ್ಷರು ತಿಳಿಸಿದ್ದು, “ಅತಿಯಾದ ಜನಸಂದಣಿ” ಯಿಂದ ಕಾಲ್ತುಳಿತ ಉಂಟಾಗಿದೆ ಎಂದು ಹೇಳಿದ್ದಾರೆ.
ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ಗಾಯಾಳುಗಳನ್ನು ಭೇಟಿ ಮಾಡಿ ವೈದ್ಯರೊಂದಿಗೆ ಅವರ ಆರೋಗ್ಯ ಸ್ಥಿತಿ ಬಗ್ಗೆ ಚರ್ಚಿಸಿದರು.ಕಾಲ್ತುಳಿತ ‘ದುರದೃಷ್ಟಕರ’- ಟಿಟಿಡಿ
ಘಟನೆಯನ್ನು “ದುರದೃಷ್ಟಕರ” ಎಂದು ಕರೆದ ಬಿ.ಆರ್. ನಾಯ್ಡು, ಶೀಘ್ರದಲ್ಲೇ ವಿಸ್ತೃತ ವರದಿಯನ್ನು ಬಿಡುಗಡೆ ಮಾಡಲಾಗುವುದು ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
”(ಕಾಲ್ತುಳಿತಕ್ಕೆ) ಜನದಟ್ಟಣೆಯೇ ಕಾರಣ…ಇದೊಂದು ದುರಾದೃಷ್ಟಕರ ಘಟನೆ… ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲವನ್ನೂ ಹೇಳುತ್ತಾರೆ, ಇವತ್ತು ಸಂಫೂರ್ಣ ವರದಿ ಬರಲಿದೆ. ಒಟ್ಟು 6 ಮಂದಿ ಸಾವಿಗೀಡಾಗಿದ್ದು, ಒಬ್ಬರ ಮೃತದೇಹವನ್ನು ಗುರುತಿಸಲಾಗಿದೆ ಮತ್ತು 5 ಮಂದಿಯನ್ನು ಗುರುತಿಸಬೇಕಾಗಿದೆ ಎಂದು ಹೇಳಿದರು.ಏತನ್ಮಧ್ಯೆ, ಟಿಟಿಡಿ ಮಂಡಳಿ ಸದಸ್ಯ ಭಾನು ಪ್ರಕಾಶ ರೆಡ್ಡಿ ಘಟನೆಗೆ ಕ್ಷಮೆಯಾಚಿಸಿದ್ದು, ಈ ಬಗ್ಗೆ ಟ್ರಸ್ಟ್ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ನಾಯ್ಡು ಮತ್ತು ರಾಜ್ಯ ಆರೋಗ್ಯ ಸಚಿವರು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದಲ್ಲಿ ಸುಮಾರು 40 ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.