Join The Telegram | Join The WhatsApp |
ಬೆಳಗಾವಿ :
ಉತ್ತಮವಾದ ಶಿಸ್ತು ಹಾಗೂ ಸದೃಢವಾದ ಗುರಿ ಇದ್ದರೆ ನಾವು ಜೀವನದಲ್ಲಿ ಏನೆಲ್ಲವನ್ನೂ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಗುರಿಯೆಡೆ ಹೆಜ್ಜೆ ಇಡಬೇಕೆಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ದರ್ಶನ್ ಎಸ್. ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಸೈನಿಕ ಶಿಬಿರದಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಎನ್‌ಸಿಸಿ ಕೆಡೆಟ್ ಪ್ರೀತಿ ಸವದಿ, ಗುರುನಾಥ ರಾಜೋಳಿ ಅವರನ್ನು ಸತ್ಕರಿಸಿ ಮಾತನಾಡಿದರು.
ಭವಿಷ್ಯವನ್ನು ರೂಪಿಸುವಲ್ಲಿ ಎನ್‌ಸಿಸಿ ಘಟಕವು ಮಹತ್ವಪೂರ್ಣವಾದ ಪಾತ್ರ ವಹಿಸುತ್ತದೆ. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಾವು ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅವಕಾಶಗಳು ಬಂದಾಗ ಅವುಗಳನ್ನು ಮುಕ್ತ ಮನಸ್ಸಿನಿಂದ ಬಾಚಿಕೊಂಡು ಯಶಸ್ಸಿನೆಡೆಗೆ ಸಾಗಬೇಕು. ಒಂದು ಸಂದರ್ಭದಲ್ಲಿ ಕಲಿಯಲು ಸೌಲಭ್ಯಗಳ ಕೊರತೆ ಇತ್ತು. ಇಂದು ಎಲ್ಲ ಹೇರಳವಾಗಿ ಸೌಲಭ್ಯಗಳು ದೊರೆಯುತ್ತಿರುವಾಗ ಅವುಗಳನ್ನು ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ವಿಶೇಷವಾದುದ್ದನ್ನು ಸಾಧಿಸಬೇಕು. ಎನ್‌ಸಿಸಿ ಘಟಕವು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ. ತಂದೆ-ತಾಯಿಗಳ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ನಾವು ಹೆಜ್ಜೆ ಇಡಬೇಕು. ರಾಷ್ಟ್ರ ನಿರ್ಮಾಣದಲ್ಲಿ ಶ್ರೇಷ್ಠವಾದ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಮಾತನಾಡಿ, ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ‍್ಯಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಾದುದಲ್ಲ. ಅದಕ್ಕೆ ನಿರಂತರವಾದ ಪ್ರಯತ್ನ, ಶ್ರಮದ ಅಗತ್ಯತೆ ಇದೆ. ನಮ್ಮ ರಚನಾತ್ಮಕ ಹಾಗೂ ಕ್ರಿಯಾತ್ಮಕವಾದ ನಡೆನುಡಿಗಳು ನಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತವೆ. ರಾಷ್ಟ್ರೀಯ ಸಾಧನೆ ಮಾಡಿದ ವಿದ್ಯಾರ್ಥಿಗಳ ಶ್ರಮಕ್ಕೆ ಬೆಲೆ ಕಟ್ಟಲಾರದು ಎಂದು ಹೇಳಿದರು.
ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕೆಡೆಟ್ ನ್ವಮಾನ್ ನಿರೂಪಿಸಿದರು. ಕೆಡೆಟ್ ತನಿಷಾ ವಂದಿಸಿದರು.
ಪದವಿಪೂರ್ವ ಪ್ರಾಚಾರ್ಯ ಪ್ರೊ.ಗಿರಿಜಾ ಹಿರೇಮಠ, ಧರ್ಮರಾಜ ಶಿಂಧೆ, ಚಂದ್ರಶೇಖರಯ್ಯ ಸವದಿ, ಲಕ್ಷ್ಮಣ ರಾಜೋಳಿ, ಪ್ರೊ.ಚಂದ್ರಶೇಖರ, ಪ್ರೊ.ನಟರಾಜ ಪಾಟೀಲ, ಡಾ.ಶಿವಾನಂದ ಬುಲಬುಲೆ, ಕೆಡೆಟ್ ಮಣಿಕಂಠ ಪಾಟೀಲ ಉಪಸ್ಥಿತರಿದ್ದರು.
Join The Telegram | Join The WhatsApp |