ದೆಹಲಿ :
ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಹೋಗಬೇಕೆ ಹೋಗಬೇಡವೇ ಎಂಬ ಗೊಂದಲಕ್ಕೆ ಕಾಂಗ್ರೆಸ್ ಪಕ್ಷ ತೆರೆ ಎಳೆಯಲು ಮುಂದಾಗಿದೆ. ಇದೀಗ ಕೊನೆಗೂ ತನ್ನ ನಿಲುವನ್ನು ಪ್ರಕಟಿಸಿದೆ.

ಜ. 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ವರದಿಯಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ವಿಪಕ್ಷ ನಾಯಕ ಅಧೀರ್ ರಂಜನ್ ಅವರು ರಾಮ ಮಂದಿರ ಟ್ರಸ್ಟ್‌ ನೀಡಿದ್ದ ಆಹ್ವಾನವನ್ನು ತಿರಸ್ಕಾರ ಮಾಡಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಈ ನಿರ್ಧಾರದ ಹಿಂದೆ ಮತ ಬ್ಯಾಂಕ್ ರಾಜಕೀಯ ಲೆಕ್ಕಾಚಾರ ಜೋರಾಗಿದೆ ಎಂಬ ಚರ್ಚೆಯಾಗುತ್ತಿದೆ.

ಗೌರವಯುತವಾಗಿ ತಿರಸ್ಕಾರ :
ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ. ಅದೊಂದು ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕ್ರಮವಾಗಿದೆ. ಹೀಗಾಗಿ ಕಾರ್ಯಕ್ರಮದ ಅಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ ರಂಜನ್ ಚೌಧರಿ ಗೌರವಯುತವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಇದೀಗ ತಿಳಿಸಿದೆ.
ಇದೊಂದು ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕ್ರಮವಾಗಿದ್ದು ಆದ್ದರಿಂದ ಇವರು ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.

ರಾಮನನ್ನು ದೇಶದ ಕೋಟ್ಯಂತರ ಜನ ಪೂಜಿಸುತ್ತಾರೆ. ಧರ್ಮ ಎನ್ನುವುದು ವೈಯಕ್ತಿಕ ವಿಷಯ. ಆದರೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿದೆ. ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರ್ ಎಸ್ ಎಸ್ ಈಗ ಅಪೂರ್ಣಗೊಂಡಿರುವ ದೇವಾಲಯವನ್ನು ಉದ್ಘಾಟಿಸುತ್ತಿದ್ದಾರೆ. ಕೋಟ್ಯಂತರ ರಾಮಭಕ್ತರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ರಾಮಮಂದಿರ ಕುರಿತು ಸುಪ್ರೀಂಕೋರ್ಟ್ ಈ ಮೊದಲು ನೀಡಿದ್ದ ತೀರ್ಪಿಗೆ ಕಾಂಗ್ರೆಸ್ ಬದ್ಧವಿದೆ. ಆದರೆ, ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಈ ಆಹ್ವಾನವನ್ನು ನಮ್ಮ ನಾಯಕರು ಗೌರವಿತವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಜನವರಿ 22ರಂದು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ಯಾರೆಲ್ಲಾ ಅಯೋಧ್ಯೆಗೆ ತೆರಳಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.