ಬೆಂಗಳೂರು :
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಇದೀಗ ಭರ್ಜರಿ ಸಿದ್ಧತೆ ನಡೆಸಿದೆ. ಚುನಾವಣೆಗೆ ಸಾಕಷ್ಟು ಮೊದಲೇ ತನ್ನ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ಇದೆ. ಸುಮಾರು 15 ಕ್ಷೇತ್ರಗಳಿಗೆ ಒಬ್ಬರ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಸತೀಶ ಜಾರಕಿಹೊಳಿ, ಡಾ.ಅಂಜಲಿ ನಿಂಬಾಳ್ಕರ, ರಮೇಶ ಕತ್ತಿ ಅವರ ಹೆಸರು ಪಟ್ಟಿಯಲ್ಲಿದೆ. ರಮೇಶ ಕತ್ತಿ ಸದ್ಯ ಬಿಜೆಪಿಯಲ್ಲಿದ್ದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಅವರ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಅವರನ್ನು ಸೆಳೆದು ಟಿಕೆಟ್ ನೀಡುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧಿಸಿ ಸೋತಿದ್ದ ಹಾಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಹೆಸರು ಇದೀಗ ಮುಂಚೂಣಿಯಲ್ಲಿ ಕೇಳಿ ಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅವರ ಸ್ಪರ್ಧೆಗೆ ಪಕ್ಷ ಸೂಚಿಸಬಹುದು. ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ಹೆಸರು ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಕ್ಕೆ ಕೇಳಿಬಂದಿದೆ. ಈ ಮೂವರ ಹೆಸರು ಇದೀಗ ಕಾಂಗ್ರೆಸ್ ಅಂತಿಮಗೊಳಿಸಿದೆ ಎನ್ನಲಾಗಿದೆ.

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಸದ್ಯ ಬಿಜೆಪಿಯಲ್ಲಿರುವ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಗೆ ಕರೆತರುವ ಸಾಧ್ಯತೆ ಇದೆ. ಅಲ್ಲಿ ಅವರಿಗೆ ಈ ಬಾರಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಅದರಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಂಸದರು ಆಗಿರುವ ರಾಜ್ಯ ಹಿಂದುಳಿದ ಆಯೋಗಗಳ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸುವ ಸಾಧ್ಯತೆ ಇದೆ. ಕೆಲವು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡ ಅವರು ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ ನಿಚ್ಚಳವಾಗಿದೆ.

ಕಾಂಗ್ರೆಸ್ ನಾಯಕರ ಪಟ್ಟಿ..

ಕೋಲಾರ:ಕೆ.ಎಚ್.ಮುನಿಯಪ್ಪ, ಚಾಮರಾಜನಗರ: ಡಾ.ಎಚ್.ಸಿ. ಮಹದೇವಪ್ಪ, ಬಳ್ಳಾರಿ: ನಾಗೇಂದ್ರ, ಬೆಳಗಾವಿ: ಸತೀಶ್ ಜಾರಕಿಹೊಳಿ, ತುಮಕೂರು: ಮುದ್ದಹನುಮೇಗೌಡ, ಚಿತ್ರದುರ್ಗ:ಬಿ.ಎನ್.ಚಂದ್ರಪ್ಪ, ಬೆಂಗಳೂರು ಗ್ರಾ: ಡಿ.ಕೆ. ಸುರೇಶ್‌, ಹಾಸನ:ಶ್ರೇಯಸ್ ಪಟೇಲ್, ಉತ್ತರ ಕನ್ನಡ: ಡಾ.ಅಂಜಲಿ ನಿಂಬಾಳ್ಳರ್, ಚಿಕ್ಕೋಡಿ: ರಮೇಶ ಕತ್ತಿ, ಉಡುಪಿ-ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆ, ದಾವಣಗೆರೆ: ಪ್ರಭಾ ಮಲ್ಲಿಕಾರ್ಜುನ್, ಬೀದ‌ರ್: ರಾಜಶೇಖ‌ರ್ ಪಾಟೀಲ್ ಹುಮ್ನಾಬಾದ್, ವಿಜಯಪುರ: ರಾಜು ಅಲಗೂರು, ರಾಯಚೂರು: ಕುಮಾರ ನಾಯಕ