ನವದೆಹಲಿ:
ಸತತ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವ ಹೊಂದಿರುವ ಕಾಂಗ್ರೆಸ್ ಪಕ್ಷ ಈ ಸಲದ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿದೆ. ಹೀಗಾಗಿ ಜನಪ್ರಿಯ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲು ಮುಂದಾಗಿದೆ.

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲು ದಿನಗಣನೆ ಆರಂಭವಾಗಿರುವ ನಡುವೆಯೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಗೆ ಅಂತಿಮ ರೂಪ ನೀಡಿದೆ ಎಂದು ಮೂಲಗಳು
ತಿಳಿಸಿವೆ.

ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಸಭೆ ನಡೆಸುತ್ತಿರುವ ಮಾಜಿ ಸಚಿವ ಚಿದಂಬರಂ ನೇತೃತ್ವದ ಸಮಿತಿ ಸೋಮವಾರ ವರದಿ ಕುರಿತು ಸಭೆ ನಡೆಸಿತ್ತು. ಅದರ ಮುಂದುವರೆದ ಭಾಗವಾಗಿ ಮಂಗಳವಾರ ಪ್ರಣಾಳಿಕೆ ಸಮಿತಿಯ ಸದಸ್ಯರು ಸಭೆ ನಡೆಸಿ ವರದಿಗೆ ಅಂತಿಮ ರೂಪ ನೀಡಿದ್ದಾರೆ. ಶೀಘ್ರವೇ ಇದನ್ನು ಪಕದ ಹಿರಿಯ ನಾಯಕರಿಗೆ ಸಲ್ಲಿಸಲಾಗುವುದು. ಬಳಿಕ ಅದನ್ನು ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಪ್ರಣಾಳಿಕೆಯಲ್ಲಿ ಏನಿರಬಹುದು ?

1. ಉದ್ಯೋಗವೂ ಹಕ್ಕು ಎಂಬ ಭರವಸೆ, ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ಶಿಪ್ ಘೋಷಣೆ.

2. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವ ಅಂಶ ಪ್ರಸ್ತಾಪ ಸಾಧ್ಯತೆ.

3. ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ.

4.‌ ದೇಶವ್ಯಾಪಿ ಜಾತಿ ಗಣತಿ, ಅದರ ಆಧಾರದಲ್ಲಿ ಯೋಜನೆ ಜಾರಿ ಮಾಡುವ ಭರವಸೆ.

ರಾಹುಲ್ ಪ್ರಸ್ತಾಪಿತ ನ್ಯಾಯದ 5 ಸ್ತಂಭ ಆಧರಿತ ಪ್ರಣಾಳಿಕೆ ಉದ್ಯೋಗ ಹಕ್ಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ

ಕರ್ನಾಟಕ ಮಾದರಿ ಉಚಿತ ಯೋಜನೆ ?

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮೊದಲ ಬಾರಿ ಜಾರಿಗೊಳಿಸಿ ಫಲಕೊಟ್ಟ ಉಚಿತ ಯೋಜನೆಗಳು, ದೆಹಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಸ್ಥಾನ ಪಡೆಯುವ ಸಾಧ್ಯತೆ. ಸಮಾಜದ ವಿವಿಧ ವಲಯಗಳಿಗೆ ನಾನಾ ರೀತಿಯ ಉಚಿತ ಯೋಜನೆಗಳನ್ನು ಪಕ್ಷ ಘೋಷಿಸುವ ಸಾಧ್ಯತೆ ಇದೆ.