ಲೋಕಸಭಾ ಚುನಾವಣೆಗಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಐದು ನ್ಯಾಯಗಳಡಿ ೨೫ ಗ್ಯಾರಂಟಿಗಳ ಭರವಸೆ ನೀಡಿದೆ. ೨೫ ಏಕೆ, ೨೫೦ ಗ್ಯಾರಂಟಿಗಳನ್ನು ನೀಡುವ ಅಧಿಕಾರವೂ ಕಾಂಗ್ರೆಸ್ಸಿಗಿದೆ. ( ಎಲ್ಲಾ ಪಕ್ಷಗಳಿಗೂ ಇದೆ). ಈ ಮೊದಲು ಕರ್ನಾಟಕ ಮತ್ತು ತೆಲಂಗಾಣ ಗಳಲ್ಲಿ ಗ್ಯಾರಂಟಿಗಳ ರುಚಿ ನೋಡಿರುವ ಅಥವಾ ಜನರಿಗೆ ಆ ರುಚಿ ತೋರಿಸಿರುವ ಕಾಂಗ್ರೆಸ್ ಗ್ಯಾರಂಟಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇಇದೆ. ಒಮ್ಮೆ ಹುಲಿಗೆ ಮನುಷ್ಯನ ರಕ್ತದ ರುಚಿ ಹತ್ತಿದರೆ ಅದು ಮುಂದೆ ಕಂಡಕಂಡಲ್ಲಿ ಮನುಷ್ಯರ ಬೇಟೆಯಾಡುತ್ತದಂತೆ, ಹಾಗೆ ಇದು.
ರಾಜ್ಯದ ಅಥವಾ ದೇಶದ ಉದ್ಧಾರ ಆಗುವುದಿದ್ದಲ್ಲಿ ಯಾರು ಎಷ್ಟು ಗ್ಯಾರಂಟಿಗಳನ್ನು ಕೊಡುವುದಕ್ಕೂ ಯಾರದೂ ಆಕ್ಷೇಪಣೆ ಇಲ್ಲ. ಆದರೆ ಕರ್ನಾಟಕ ಈಗ ಐದು ಗ್ಯಾರಂಟಿಗಳ ಮೂಲಕ ದಿವಾಳಿಯ ಅಂಚಿಗೆ ಬಂದು ತಲುಪಿದೆ. ಅಭಿವೃದ್ಧಿಗೆ ಹಣ ಇಲ್ಲ. ಹತ್ತು ತಿಂಗಳುಗಳಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ( ಅತ್ತ ಕೇರಳ ರಾಜ್ಯವೂ ದಿವಾಳಿ ಸ್ಥಿತಿಗೆ ತಲುಪಿದೆ. ಅದು ಬೇರೆ ಕಾರಣದಿಂದ)
ಅದೇನೇ ಇದ್ದರೂ ಈಗ ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದರೆ ೨೫ ಬಗೆಯ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ನೀಡಲಿ. ಆದರೆ ಆಲೋಚನೆ ಮಾಡಬೇಕಾದ ಸಂಗತಿಗಳು ಕೆಲವಿವೆ….

ಒಂದನೆಯ ಪ್ರಶ್ನೆ:. ಕಾಂಗ್ರೆಸ್ ಈ ದೇಶದಲ್ಲಿ ಅಧಿಕಾರಕ್ಕೆ ಬರುವ ಸಂಭವ ಇದೆಯೇ? ಈವರೆಗೆ ಹೊರಬಂದ ಇಪ್ಪತ್ತಕ್ಕೂ ಹೆಚ್ಚು ಸಮೀಕ್ಷೆಗಳಲ್ಲಿ ಯಾವ ಒಂದು ಸಮೀಕ್ಷೆಯೂ ಕಾಂಗ್ರೆಸ್ ಅಥವಾ ಇಂಡಿಯಾ ಕೂಟ ಅಧಿಕಾರಕ್ಕೆ ಬರಬಹುದೆಂಬ ಸೂಚನೆ ನೀಡಿಲ್ಲ. ಕಾಂಗ್ರೆಸ್ ಹೆಚ್ಚೆಂದರೆ ೧೦೦ ಸೀಟು ಪಡೆಯುವುದೂ ಸಂದೇಹವೆಂಬ ಅಭಿಪ್ರಾಯವಿದೆ.

ಎರಡನೆಯದಾಗಿ ಒಂದು ವೇಳೆ ಅವರ ಒಕ್ಕೂಟ ಅಧಿಕಾರಕ್ಕೆ ಬಂದಿತೆಂದರೂ ಅವರಲ್ಲಿ ಸ್ವಲ್ಪವೂ ಒಮ್ಮತವಿಲ್ಲ. ಉಳಿದವರು ಕಾಂಗ್ರೆಸ್ಸಿನ ಗ್ಯಾರಂಟಿಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಯೂ ಇಲ್ಲ.

ಮೂರನೆಯದಾಗಿ ತಾನು ಅಧಿಕಾರಕ್ಕೆ ಬಂದರೆ ಅಗ್ನಿಪಥದಂತಹ ಕೆಲವು ಯೋಜನೆಗಳನ್ನು ರದ್ದುಪಡಿಸುವುದಾಗಿ ಹೇಳಿಕೊಂಡಿದೆ. ಸಂಸತ್ತಿನಲ್ಲಿ ಅಗತ್ಯ ಬಹುಮತವಿಲ್ಲದೇ ಯಾವ ಬದಲಾವಣೆ ಮಾಡಲೂ ಸಾಧ್ಯವಿಲ್ಲ ಮತ್ತು ಹಾಗೆ ರದ್ದು ಮಾಡುವುದನ್ನು ದೇಶದ ಜನ ಒಪ್ಪಿಕೊಳ್ಳುವುದೂ ಅಸಂಭವ.

ನಾಲ್ಕನೆಯದಾಗಿ ಒಂದು ವೇಳೆ ಇಂಡಿಯಾ ಒಕ್ಕೂಟದ ಸರಕಾರ ಅಧಿಕಾರಕ್ಕೆ ಬಂದು ಈ ಎಲ್ಲ ಅವ್ಯಾವಹಾರಿಕ ಗ್ಯಾರಂಟಿಗಳನ್ನು ಜಾರಿಗೆ ತರಲು ಹೊರಟರೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬಹಳ ದೊಡ್ಡ ಹೊಡೆತ ಬೀಳಲಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಲಿವೆ.

ದೇಶದ ಬೆಳವಣಿಗೆ ಸ್ಥಗಿತಗೊಂಡರೂ ಪರವಾಗಿಲ್ಲ, ನಮಗೆ ಗ್ಯಾರಂಟಿಗಳೇ ಮುಖ್ಯ ಎಂದು ದೇಶದ ಮತದಾರರು ಹೇಳುವುದಾದರೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು ದೇಶದ ದಿವಾಳಿತನ ಕ್ಕೆ ಹಾದಿ ಮಾಡಿಕೊಡುವ ಹಕ್ಕೂ ಜನರಿಗಿದೆ. ಆಯ್ಕೆ ಜನರದು ಅಂದರೆ ಮತದಾರರದು. ಆದರೆ ದೇಶದ ಮತದಾರರು ಅಷ್ಟು ಮೂರ್ಖರಲ್ಲವೆಂದುಕೊಳ್ಳೋಣ. ಈ ವರೆಗಿನ ಸಮೀಕ್ಷೆಗಳೇ ಅದನ್ನು ಸ್ಪಷ್ಟಪಡಿಸಿವೆ.

– ಎಲ್. ಎಸ್. ಶಾಸ್ತ್ರಿ