ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರಗಳು ಆರಂಭಗೊಂಡಿದೆ. ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿದೆ. ಇದರ ನಡುವೆ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನೂ ಪಕ್ಷಗಳು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಕಾಂಗ್ರೆಸ್ ಲೋಕಸಭಾ ಚುನಾವಣಾ 6ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 6ನೇ ಪಟ್ಟಿಯಲ್ಲಿ 5 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ರಾಜಸ್ಥಾನದ 5 ಕ್ಷೇತ್ರ ಹಾಗೂ ತಮಿಳುನಾಡಿನ ಒಂದು ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಲಾಗಿದೆ.

ತಮಿಳುನಾಡು ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳಿಗೆ ಟಿಕೆಟ್ ಅಂತಿಮಗೊಳಿಸಿದೆ. ಒಂದು ಸ್ಥಾನ ಬಾಕಿ ಉಳಿಸಿಕೊಂಡಿದೆ. 6 ನೇ ಪಟ್ಟಿಯಲ್ಲಿ ತಮಿಳುನಾಡಿನ ತಿರುನೇಲ್ವೆಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಲಾಗಿದೆ. ವಕೀಲ ಸಿ ರಾಬರ್ಟ್ ಬ್ರೂಸ್‌ಗೆ ಟಿಕೆಟ್ ನೀಡಲಾಗಿದೆ. ರಾಜಸ್ಥಾನದ ಅಜ್ಮೆರ್ ಕ್ಷೇತ್ರಕ್ಕೆ ರಾಮಚಂದ್ರ ಚೌಧರಿಗೆ ಟಿಕೆಟ್ ನೀಡಲಾಗಿದೆ. ನಾಯಕ ಸುದರ್ಶನ್ ರಾವತ್‌ಗೆ ರಾಜಮಸಂದ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬಿಲ್ವಾರಾ ಕ್ಷೇತ್ರದಿಂದ ಡಾ. ದಾಮೋದರ್ ಗುರ್ಜರ್, ಕೋಟಾ ಕ್ಷೇತ್ರದಿಂದ ಪ್ರಹ್ಲಾದ್ ಗುಂಜಾಲ್‌ಗೆ ಟಿಕೆಟ್ ನೀಡಲಾಗಿದೆ.

ಭಾನುವಾರ ಕಾಂಗ್ರೆಸ್ 5ನೇ ಪಟ್ಟಿ ಪ್ರಕಟಿಸಿತ್ತು. ಪ್ರಮುಖವಾಗಿ ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಪ್ರತಾಪ ಸಿಂಗ್ ಕಚಾರಿಯಾವಾಸ್‌ಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಆರೋಪದಡಿ ಸುನಿಲ್ ಶರ್ಮಾಗೆ ಟಿಕೆಟ್ ನಿರಾಕರಿಸಲಾಗಿದೆ. ರಾಜಸ್ಥಾನದ ದೌಸಾ ಕ್ಷೇತ್ರದಿಂದ ಮರಳಿ ಲಾಲ್ ಮೀನಾಗೆ ಟಿಕೆಟ್ ನೀಡಲಾಗಿದೆ. ಮಹಾರಾಷ್ಟ್ರದ ಚಂದಾಪುರ ಕ್ಷೇತ್ರದಿಂದ ಪ್ರತಿಭಾ ಸುರೇಶ್ ದಾನೋರ್ಕರ್‌ಗೆ ಟಿಕೆಟ್ ನೀಡಲಾಗಿದೆ.