ಬೆಳಗಾವಿ : ಜಗತ್ತಿನ ಎಲ್ಲ ದೇಶಗಳ ಸಂವಿಧಾನಕ್ಕಿಂತ ಭಾರತದ್ದು ಶ್ರೇಷ್ಠ ಸಂವಿಧಾನ. ಇದು ನಮ್ಮ ಬದುಕನ್ನು ಔನ್ನತ್ಯಕ್ಕೇರಿಸುವ ಗ್ರಂಥ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರದಂದು ಸಂವಿಧಾನ ಓದು ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲರೂ ಈ ದೇಶವನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಹೋರಾಡಿದರು. ಸ್ವಾತಂತ್ರ್ಯ ಬಂದ ಮೇಲೆ ಬಹುಸಂಖ್ಯಾತ ಹಿಂದೂಗಳಿರುವ ಈ ದೇಶವನ್ನು ಹಿಂದೂ ದೇಶವನ್ನಾಗಿ ಮಾಡಬೇಕು ಎಂಬುದು ಕೆಲವರ ಆಗ್ರಹವಾಯಿತು. ಆದರೆ, ಸಂವಿಧಾನ ರಚನಾಕಾರರು ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಎಲ್ಲಾ ಧರ್ಮೀಯರು ಹೋರಾಟ ಮಾಡಿದ್ದಾರೆ. ಈ ದೇಶವನ್ನು ಜಾತ್ಯತೀತ ದೇಶವನ್ನಾಗಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದರು. ಈ ದೇಶದಲ್ಲಿ ಅನೇಕ ಧರ್ಮಗಳಿವೆ. ಒಂದೊಂದು ಧರ್ಮಕ್ಕೆ ಒಂದೊಂದು ಧರ್ಮಗ್ರಂಥವಿದೆ. ಆದರೆ ಭಾರತೀಯರಿಗೆ ಶ್ರೇಷ್ಠ ಗ್ರಂಥವೆಂದರೆ, ಅದು ಸಂವಿಧಾನ. ಸಂವಿಧಾನ ನಮಗೆ ಬುದುಕು ನೀಡಿದೆ. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೇಶ ಅರ್ಥವಾಗುತ್ತದೆ. ನಮ್ಮ ಮನೆಯಲ್ಲಿ ಇರುವವರು ವಿಭಿನ್ನ ವಾದ ಅಭಿರುಚಿ, ಆಚಾರ, ವಿಚಾರ ಹೊಂದಿದ್ದರೂ ಸಹಬಾಳ್ವೆಯಿಂದ ಬದುಕುತ್ತೇವೆ. ಈ ಸಹಬಾಳ್ವೆ ಸಹಿಷ್ಣುತೆ ಸಮಾಜದಲ್ಲಿ ಏಕೆ ಸಾಧ್ಯವಿಲ್ಲ. ಸಹಿಷ್ಣುತೆ ಮತ್ತು ಸಹಬಾಳ್ವೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುತ್ತದೆ. ಸರ್ಕಾರ ಖಾಸಗೀಕರಣ ಮಾಡುತ್ತಾ ತನ್ನ ಜವಾಬ್ದಾರಿಯಿಂದ ಹಿಂದೆ ಸುರಿಯುತ್ತಿದೆ. ಜನರ ಮೂಲಭೂತವಾದ ಅವಶ್ಯಕತೆಯನ್ನು ಒದಗಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಯುವಕರು ಸಂವಿಧಾನವನ್ನು ಸರಿಯಾಗಿ ಓದಿಕೊಂಡು ಅದರ ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು, ಸಂವಿಧಾನ ಓದು ಪುಸ್ತಕ ಪ್ರತಿಯೊಬ್ಬರು ಓದಲೇ ಬೇಕಾದ ಪುಸ್ತಕ. ಸಂವಿಧಾನ ನಮ್ಮ ಬದುಕಿನ ಆಶಾಕಿರಣ. ಸಂವಿಧಾನದ ಮೂಲಕ ಈ ದೇಶವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಸಶಕ್ತವಾಗಿ ಕಟ್ಟಬೇಕು. ನಮ್ಮ ಓದು ಹೃದಯ ಮತ್ತು ಆತ್ಮವನ್ನು ಮುಟ್ಟಬೇಕು. ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ರಚನಾಕಾರರು, ಈ ದೇಶವನ್ನು ಕಟ್ಟಿದ ಮಹನೀಯರು ನಮಗೆ ಆದರ್ಶನೀಯರು. ಈ ಆದರ್ಶಗಳೇ ನಮ್ಮನ್ನು ಬೆಳೆಸುತ್ತವೆ. ನಿಮ್ಮ ನಿಮ್ಮ ಗುರಿಯನ್ನು ಪ್ರೀತಿಸಿ, ಆರಾಧಿಸಿ, ಆ ಮೂಲಕ ತಲುಪಬೇಕಾದ ದಾರಿಯನ್ನು ಕ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಂ.ಜಿ.ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಭಾರತಿ ನಾಯಕ್ ಸ್ವಾಗತಿಸಿದರು. ಮೋನಿಕಾ ಹಳ್ಳೂರ್ ಪರಿಚಯಿಸಿದರು. ಸೃಷ್ಟಿ ಬಾಡಗಿ ವಂದಿಸಿದರು. ಗಾಯತ್ರಿ ಹಲಗಿ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿಗಳ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.