ಬೆಳಗಾವಿ: ಕರಾಡ-ಕೊಲ್ಲಾಪುರ-ಬೆಳಗಾವಿ ರೈಲ್ವೆ ಮಾರ್ಗ ಮತ್ತು ಶೇಡಬಾಳ-ಅಥಣಿ- ವಿಜಯಪುರ ನೂತನ ರೈಲ್ವೆ ಮಾರ್ಗಗಳನ್ನು ಕೇಂದ್ರ ಸರಕಾರದ ಅನುದಾನ ಬಿಡುಗಡೆಗೊಳಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಇದೀಗ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದೆ.ಹೋರಾಟ ಸಮಿತಿಯ ಸದಸ್ಯರು ಸಂಸದೆಯನ್ನು ಭೇಟಿಯಾಗಿ, ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಒಂದೂವರೆ ದಶಕದಿಂದ ಕುಂಟುತ್ತ ಸಾಗಿರುವ ಕುಡಚಿ-ಬಾಗಲಕೋಟೆ ನೂತನ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಹಲವಾರು ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೋರಾಟ ಸಮಿತಿಯ ಸದಸ್ಯರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.