ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಯು ಸಜ್ಜಾಗಿದೆ. ಗುರುವಾರ (ಅಕ್ಟೋಬರ್ 3) ಬೆಳಿಗ್ಗೆ 9.15ರಿಂದ 9.45ರೊಳಗೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಹತ್ತು ದಿನಗಳ ಉತ್ಸವ ಗರಿಗೆದರಲಿದೆ.
ಪ್ರೊ.ಹಂ.ಪ. ನಾಗರಾಜಯ್ಯ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಬಳಿಕ ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮೊದಲ ದಿನ ಹನ್ನೊಂದು ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.
ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ, ಕಾವಾ ಆವರಣದಲ್ಲಿ ಶಿಲ್ಪ, ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ‘ನವರಾತ್ರಿ ಜಾನಪದ ರಂಗೋತ್ಸವ’ ಹಾಗೂ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಆರಂಭಗೊಳ್ಳಲಿವೆ.
ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲು ಕ್ಷಣಗಣನೆ ಶುರುವಾಗಿದ್ದು, ಗುರುವಾರ ಬೆಳಿಗ್ಗೆ ದಟ್ಟ ಮಂಜು ಮುಸುಕಿದ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಗರಿಗೆದರಿದೆ.
ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಉತ್ಸವ ಶುರುವಾಗಲಿದ್ದು, ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ತರುವ ವೇಳೆ, ನೆರೆದಿದ್ದ ಗ್ರಾಮಸ್ಥರು, ಪೊಲೀಸ್ ಸಿಬ್ಬಂದಿ ಕೈಮುಗಿದು ನಮಸ್ಕರಿಸಿದರು. ದೇವಿಯ ಫೋಟೋ ತೆಗೆದುಕೊಂಡರು.
ಪ್ರೊ.ಹಂಪನಾ ಉತ್ಸವಕ್ಕೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ಬೆಟ್ಟದ ದಾರಿಯುದ್ದಕ್ಕೂ ಪೊಲೀಸರ ಬಿಗಿ ಭದ್ರತೆ ಏರ್ಪಡಿಸಿದ್ದು, ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.