ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಮಾನಹಾನಿಕರ ವಿಡಿಯೊಗಳನ್ನು ನಿರ್ಮಿಸಿ ಅವುಗಳನ್ನು ಬಿತ್ತರಿಸಿರುವ, ವಿಡಿಯೊಗಳನ್ನು ತೆಗೆದುಹಾಕಬೇಕು ಎಂದು ಯೂಟ್ಯೂಬ‌ರ್ ಎಂ.ಡಿ.ಸಮೀ‌ರ್ ಸೇರಿದಂತೆ ಈ ವಿಡಿಯೊಗಳನ್ನು ಹಂಚಿಕೊಂಡಿರುವ ಇತರೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ನಗರದ ನ್ಯಾಯಾಲಯ ಆದೇಶಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ’ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಅಂಗಸಂಸ್ಥೆಗಳ ಪರವಾಗಿ ಎ.ಎಸ್.ಸುಖೇಶ್ ಮತ್ತು ಶೀನಪ್ಪ ಸೇರಿದಂತೆ ನಾಲ್ವರು ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ ಸಿಸಿಎಚ್ 11ನೇ ನ್ಯಾಯಾಲಯದ ನ್ಯಾಯಾಧೀಶ ಎನ್‌.ಎಸ್.ನಟರಾಜ್ ಈ ಕುರಿತಂತೆ ಆದೇಶಿಸಿ ವಿಚಾರಣೆ ಮುಂದೂಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಮತ್ತು ಅಜಾಗೂರಕ ಆರೋಪಗಳನ್ನು ಹೊತ್ತ ಸುದ್ದಿಗಳನ್ನು ಮತ್ತು ವಿಡಿಯೊಗಳನ್ನು ನಿರ್ಮಿಸುವುದು, ಬಿತ್ತರಿಸುವುದು, ಪ್ರಕಟಿಸುವುದು, ರವಾನಿಸುವುದು, ಅಪ್‌ಲೋಡ್ ಮಾಡುವುದು, ಮತ್ತೊಬ್ಬರಿಗೆ ಕಳುಹಿಸುವುದು, ಹಂಚಿಕೊಳ್ಳುವುದೂ ಸೇರಿದಂತೆ ಅವುಗಳ ಬಿತ್ತರಿಸುವಿಕೆಯನ್ನು ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ವಾದಿಗಳು ಕೋರಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಾಜಶೇಖರ ಎಸ್.ಹಿಲಿಯಾರು ವಾದ ಮಂಡಿಸಿದರು.