Join The Telegram | Join The WhatsApp |
ನವದೆಹಲಿ: ಕೋವಿಡ್ ಪರಿಸ್ಥಿತಿಯ ಕುರಿತು ಉನ್ನತ ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಬುಧವಾರ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಜಾಗತಿಕವಾಗಿ ಕೊರೊನಾವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕು ಮತ್ತು ಕಣ್ಗಾವಲು ಬಲಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೋವಿಡ್ ಇನ್ನೂ ಮುಗಿದಿಲ್ಲ. ಈ ಬಗ್ಗೆ ಜಾಗರೂಕರಾಗಿರಲು ಮತ್ತು ಕಣ್ಗಾವಲು ಬಲಪಡಿಸುವಂತೆ ಸಂಬಂಧಿಸಿದ ಎಲ್ಲರಿಗೂ ನಿರ್ದೇಶನ ನೀಡಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದು ಸಭೆಯ ನಂತರ ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಕೋವಿಡ್ ಇನ್ನೂ ವಿಶ್ವದಿಂದ ನಿರ್ನಾಮ ಆಗಿಲ್ಲ. ಕರ್ನಾಟಕದಲ್ಲಿ ಕೂಡ ಕೋವಿಡ್ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯವಿದೆ. ಇಂದು ಸಂಜೆ ಸಲಹಾ ಸಮಿತಿ ಸಭೆಯಲ್ಲಿ ಕೆಲವು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಗುಂಪಾಗಿ ಜನರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರಗಳು ಕೂಡ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಯಾವುದೇ ರೀತಿಯ ನೆರವಿಗೆ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚನೆ ನೀಡಿದೆ.
Join The Telegram | Join The WhatsApp |