ನವದೆಹಲಿ: ಸಿಆರ್ಪಿಎಫ್(CRPF), ಬಿಎಸ್ಎಫ್ (BSF) ಮತ್ತು ಸಿಐಎಸ್ಎಫ್ನಂಥ (CISF) ಅರೆ ಸೇನಾ ಪಡೆಗಳ ಕಾನ್ಸ್ಟೇಬ್ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ, ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯವು ಭಾನುವಾರ ಹೇಳಿದೆ.
ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಎಕ್ಸಾಮ್ ಬರೆಯಲಿದ್ದಾರೆ. ಈ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿುವುದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಟಾಫ್ ಸೆಲಕ್ಷನ್ ಕಮಿಷನ್(SSC) ಈ ಕಾನ್ಸ್ಟೇಬಲ್(ಸಾಮಾನ್ಯ ಕರ್ತವ್ಯ) ಪರೀಕ್ಷೆಯನ್ನು ಕೈಗೊಳ್ಳುತ್ತಿದೆ. ಈ ಮೂಲಕ ಕೇಂದ್ರ ಸಶಸ್ತ್ರ ಪಡೆಗಳಿಗೆ ಲಕ್ಷಾಂತರ ಯುವಕರನ್ನು ಆಕರ್ಷಿಸಲಾಗುತ್ತಿದೆ. ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲು ಎಸ್ಎಸ್ಸಿ ಮತ್ತು ಕೇಂದ್ರ ಗೃಹ ಸಚಿವಾಲಯವು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿವೆ.