ಆರ್ಡಿ: ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಜ.2 ರಂದು ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ವೈಭವ ನಡೆಯಲಿದೆ.

ಬೆಳಗ್ಗೆ 9.15 ಕ್ಕೆ ದಾನಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ಎಸ್‌ಡಿಎಂಸಿ, ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಮಧ್ಯಾಹ್ನ 1ಕ್ಕೆ ಸಾಂಸ್ಕೃತಿಕ ವೈಭವ ನಡೆಯಲಿವೆ.

1963 ರಲ್ಲಿ ವಿದ್ಯಾಭಿಮಾನಿ, ದಾನಿ ಚಾರ್ಮಕ್ಕಿ ನಾರಾಯಣ ಶೆಟ್ಟಿಯವರು ನಿರ್ಮಿಸಿದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಇತ್ತೀಚಿನ ವರ್ಷಗಳಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಾಗಿ ನಾಮಕರಣಗೊಂಡು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಕುಂದಾಪುರ ತಾಲೂಕಿನಲ್ಲಿದ್ದ ಈ ಶಾಲೆ ಈಗ ಹೆಬ್ರಿ ತಾಲೂಕಿಗೆ ಸೇರಿದ್ದು, 5.24 ಎಕರೆ ವಿಶಾಲ ಸ್ಥಳ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ 169 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಗಳಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಕಟ್ಟಡ, ಶಿಕ್ಷಕರ ಕೊಠಡಿ, ಮುಖ್ಯ ಶಿಕ್ಷಕರ ಕಚೇರಿ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಮಾದರಿ ಕಂಪ್ಯೂಟರ್ ಕೊಠಡಿ, ವಿಶಾಲ ಸಭಾಂಗಣ, ಬಯಲು ರಂಗಮಂದಿರವಿದೆ. ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಗಣ್ಯರು ನೀಡುವ ದತ್ತಿನಿಧಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ.


ಶ್ರೇಷ್ಠ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

ದಾನಿಗಳು, ಹಳೇ ವಿದ್ಯಾರ್ಥಿಗಳು, ಎಸ್ ಡಿಎಂಸಿ, ಶಿಕ್ಷಣಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು ಕೊಡುಗೆ ನೀಡಿ ಶಾಲೆ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಉತ್ತಮ ಶಿಕ್ಷಕ ವೃಂದವರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದೆ.

* ಪ್ರತಿಮಾ, ಮುಖ್ಯ ಶಿಕ್ಷಕಿ