- ಬೆಳಗಾವಿ : ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಸೋಲಿಗೆ ನನ್ನ ಹಾಗೂ ಬಿಜೆಪಿ ಅಭಿಮಾನಿಗಳ ಶಾಪವೇ ಕಾರಣ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕೋಡಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಚಿಕ್ಕೋಡಿಯಲ್ಲಿ ಸೋತಿದ್ದು ನಿಮ್ಮ ಸ್ವಯಂಕೃತ ಅಪರಾಧದಿಂದಲೇ ಹೊರತು ಅಲ್ಲಿ ಬಿಜೆಪಿ ಮತ್ತು ಮೋದಿ ಸೋತಿಲ್ಲ. ಚಿಕ್ಕೋಡಿಯಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಅತ್ಯಂತ ಸುರಕ್ಷಿತವಾಗಿದೆ.
ಆದರೆ, ಜೊಲ್ಲೆಯವರ ಅಹಂಕಾರ, ಸೊಕ್ಕಿನ ವರ್ತನೆ, ಕಾರ್ಯಕರ್ತರ ಯಾವುದೇ ಸಂಪರ್ಕ ಇಲ್ಲದ ವ್ಯಕ್ತಿಗೆ ಚಿಕ್ಕೋಡಿ ಯಲ್ಲಿ ಟಿಕೆಟ್ ನೀಡಿದ್ದರಿಂದ ಪಕ್ಷ ಸೋಲುವಂತಾಯಿತು.
ಬಿಜೆಪಿಯನ್ನು ಅತ್ಯಂತ ಕಡೆಗಣಿಸಿದ ವ್ಯಕ್ತಿಗೆ ಸೋಲಾಗಿದೆ. ಜೊಲ್ಲೆಯವರೇ ಸೋತಿದ್ದು ಹೊರತು ಅಲ್ಲಿ ಬಿಜೆಪಿ ಸೋತಿಲ್ಲ. ಆದರೆ ಅವರು ಬಿಜೆಪಿ ಮತ್ತು ಪಕ್ಷದ ಸಿದ್ಧಾಂತವನ್ನು ಹಾಳು ಮಾಡಿದ್ದಾರೆ. ಭ್ರಷ್ಟ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಇಡೀ ಕ್ಷೇತ್ರವನ್ನು ಒಮ್ಮೆಯೂ ಸಂಚರಿಸದ ಎಂಪಿ ಇದ್ದರೆ ಅದು ಜೊಲ್ಲೆಯವರು. ನಿಮ್ಮ ತಪ್ಪಿನಿಂದ ನೀವು ಸೋತಿದ್ದೀರಿ.
ಆದರೆ ಪಕ್ಷ ಮತ್ತು ಕಾರ್ಯಕರ್ತರು ಸೋತಿಲ್ಲ. ಇದಕ್ಕೆ ನಾನೇ ಒಬ್ಬ ಜ್ವಲಂತ ಉದಾಹರಣೆ. ನನ್ನ ಶಾಪ ನಿಮಗೆ ತಟ್ಟಿದೆ. ಮೋದಿ ಗೆಲ್ಲಿಸಿ ಭಾರತ ಉಳಿಸಿ ಎಂದು ಚಿಕ್ಕೋಡಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದೆ. ಎರಡು ಸಲ ನಿಮ್ಮ ಮನೆ ಬಾಗಿಲಿಗೆ ಬಂದು ಕಾರ್ಯಕ್ರಮದ ರೂಪರೇಷೆ ಪಡೆದು ನಿಮ್ಮಿಂದ ಒಪ್ಪಿಗೆ ಪಡೆದೆ. ಆದರೆ ನೀವು ಬಾರದೆ ನನಗೆ ಅಪಮಾನ ಮಾಡಿದ್ದೀರಿ. ಶಿವಮೊಗ್ಗದಿಂದ ಈಶ್ವರಪ್ಪ ಬಂದರೂ ಸಹಾ ನೀವು ಮನೆಯಲ್ಲಿ ಮಲಗಿದ್ದೀರಿ. ನಮ್ಮ ಹಿಂದೂ ಕಾರ್ಯಕರ್ತರ ಮತ್ತು ಮೋದಿಗೆ ಮಾನಸಿಕವಾಗಿ ನೋವಾಗಲು ನೀವೇ ಕಾರಣ. ಮೋದಿಯ ವರ್ಚಸ್ಸು ಹಾಳು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.