ಬೆಂಗಳೂರು : ಕೇರಳದ ದಕ್ಷಿಣ ಕರಾವಳಿ ಹಾಗೂ ಶ್ರೀಲಂಕಾದಿಂದ ದೂರದಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಹೀಗಾಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಚಂಡಮಾರುತದ ಪರಿಚಲನೆಯ ಪ್ರಭಾವದಿಂದ ಕರ್ನಾಟಕದಲ್ಲಿ ನವೆಂಬರ್ 9 ರ ನಂತರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.
ನವೆಂಬರ್ 9 ರ ನಂತರ ಮಲೆನಾಡು ಪ್ರದೇಶ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ, ಮಲೆನಾಡು ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಇನ್ನೂ ಗಮನಾರ್ಹ ಮಳೆಯಾಗುವ ಸಾಧ್ಯತೆಯಿದೆ.
ನವೆಂಬರ್ 9ರ ಬಳಿಕ ಕರ್ನಾಟಕದ 19ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಚಂಡಮಾರುತದ ಪರಿಚಲನೆಯಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಮೇಲೆ ಗಾಳಿಯು ತೀವ್ರಗೊಳ್ಳುವುದರಿಂದ ಮಳೆಯ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹವಾಮಾನ ವಿಶ್ಲೇಷಕರು ಹೇಳಿದ್ದಾರೆ. ಈ ಚಂಡಮಾರುತ ಪರಿಚಲನೆಯು ತೀವ್ರಗೊಂಡ ಸ್ಪಷ್ಟ ಸೈಕ್ಲೋನ್ ಆಗಿ ಪರಿವರ್ತನೆಗೊಂಡರೆ ಮತ್ತೆ ಕೇರಳ, ತಮಿಳುನಾಡು, ಆಂಧ್ರ ಕರಾವಳಿ ಭಾಗ ಹಾಗೂ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅತೀವ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.