ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ಗುಂಪೊಂದು ಇಲ್ಲಿನ ಧನ್‌ಮೊಂಡಿ ಪ್ರದೇಶದಲ್ಲಿರುವ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರ ಮತ್ತು ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಸೇರಿದಂತೆ ನಾಲ್ಕು ಹಿಂದೂ ದೇವಾಲಯಗಳಿಗೆ ಹಾನಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಸೇರಿದಂತೆ ಢಾಕಾದ ವಿವಿಧ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಸೋಮವಾರ ಮಧ್ಯಾಹ್ನ ಬೆಂಕಿ ಹಚ್ಚಿದರು ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಈ ಮ್ಯೂಸಿಯಂ ಅನ್ನು 1975ರಲ್ಲಿ ರಾಷ್ಟ್ರಪತಿಯಾಗಿದ್ದಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಸಮರ್ಪಿಸಲಾಗಿದೆ.

2010ರ ಮಾರ್ಚ್‌ನಲ್ಲಿ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ದ್ವಿಪಕ್ಷೀಯ ಸಾಂಸ್ಕೃತಿಕ ಸಂಪರ್ಕವನ್ನು ಈ ಕೇಂದ್ರವು ಉತ್ತೇಜಿಸುತ್ತದೆ.
ಈ ಕೇಂದ್ರವು ಭಾರತೀಯ ಕಲೆ, ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ ಮತ್ತು ಕಾದಂಬರಿ ಕ್ಷೇತ್ರಗಳಿಗೆ ಸಂಬಂಧಿಸಿದ 21,000 ಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯವನ್ನು ಹೊಂದಿದೆ.

ಬಾಂಗ್ಲಾದೇಶದ ಢಾಕಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ನಗರದಲ್ಲಿ ಇಸ್ಕಾನ್ ದೇವಾಲಯ ಮತ್ತು ಕಾಳಿ ದೇವಾಲಯದ ಮೇಲೆ ದಾಳಿ ನಡೆಸಲಾಗಿದೆ ಎಂಬ ವರದಿಗಳು ಭಕ್ತರು ಆಶ್ರಯ ಪಡೆಯುವಂತೆ ಒತ್ತಾಯಿಸಿವೆ.

ವರದಿಯ ಪ್ರಕಾರ, ಇಬ್ಬರು ಹಿಂದೂ ಕೌನ್ಸಿಲರ್‌ಗಳನ್ನು ಸಹ ಗುಂಡಿಕ್ಕಿ ಕೊಲ್ಲಲಾಯಿತು. ಆದರೆ, ಆ ಬಗ್ಗೆ ಯಾವುದೇ ದೃಢೀಕರಣ ಇಲ್ಲ.

ಢಾಕಾದಲ್ಲಿ ಅಶಿಸ್ತಿನಿಂದ ಕೂಡಿದ್ದ ಗುಂಪೊಂದು ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿದೆ ಮತ್ತು ಸೋಮವಾರ ದೇಶಾದ್ಯಂತ ನಾಲ್ಕು ಹಿಂದೂ ದೇವಾಲಯಗಳು “ಸಣ್ಣ” ಹಾನಿಯನ್ನು ಅನುಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.

ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇಬನಾಥ್ ಮಾತನಾಡಿ, ದೇಶಾದ್ಯಂತ ಕನಿಷ್ಠ 4 ಹಿಂದೂ ದೇವಾಲಯಗಳಿಗೆ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ.
“ಇವು ಸಣ್ಣ ಹಾನಿಗಳಾಗಿವೆ,” ಅವರು ಹೇಳಿದರು. ಆದರೆ, ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ಹಿಂದೂ ಸಮಾಜದ ಮುಖಂಡರು ಭಯಭೀತರಾಗಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ಅಶಿಸ್ತಿನ ಗುಂಪು ಹಾನಿಗೊಳಿಸಿದೆ. ಪ್ರತಿಭಟನಾಕಾರರು ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಬೆಂಕಿ ಹಚ್ಚಿದರು, ಬಂಗಬಂಧು ಭಾಬನ್, ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಎಂದೂ ಕರೆಯುತ್ತಾರೆ.