ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರಾಯ್ಕೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರೇಶಿಂ ಬಾಂಗ್‌ನ ಸ್ಮೃತಿ ಭವನದಲ್ಲಿ ನಡೆದ ಆರ್‌ಎಸ್‌ಎಸ್ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಆರ್‌ಎಸ್‌ಎಸ್‌ ಅಧಿಕೃತ ಘೋಷಣೆ ಮಾಡಿದೆ.

ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರು 2021ರಲ್ಲಿ ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಆಯ್ಕೆಯಾಗಿದ್ದರು. ಈಗ ಮತ್ತೆ ಮೂರು ವರ್ಷಗಳ ಅವಧಿಗಾಗಿ ಅವರನ್ನು ಮುಂದುವರಿಸಲಾಗಿದೆ. “ದತ್ತಾತ್ರೇಯ ಹೊಸಬಾಳೆ ಅವರು 2027ರವರೆಗೆ ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ಮುಂದುವರಿಸಲು ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ ಪೋಸ್ಟ್‌ ಮಾಡಿದೆ.

ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ಪುನರಾಯ್ಕೆಯಾದ ದತ್ತಾತ್ರೇಯ ಹೊಸಬಾಳೆ ಅವರಿಗೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಅವರು ಅಭಿನಂದನೆ ಸಲ್ಲಿಸಿದರು. ನಾಗ್ಪುರದಲ್ಲಿ ನಡೆದ ಮೂರು ದಿನಗಳ ಸಭೆಯು ಭಾನುವಾರ (ಮಾರ್ಚ್‌ 17) ಸಮಾರೋಪಗೊಂಡಿದೆ. ರಾಮಮಂದಿರ ಉದ್ಘಾಟನೆ ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಮೂರು ದಿನ ನಡೆದ ಸಭೆಯಲ್ಲಿ 2023-24ನೇ ಸಾಲಿನಲ್ಲಿ ಆರ್‌ಎಸ್‌ಎಸ್‌ ಕೈಗೊಂಡ ಕಾರ್ಯಚಟುವಟಿಕೆಗಳು, ಬೈಠಕ್‌ಗಳು, ಸೇವಾ ಕಾರ್ಯಗಳ ಅವಲೋಕನ ಮಾಡಲಾಯಿತು. 2024-25ನೇ ಸಾಲಿನಲ್ಲಿ ಸಂಘಟನೆಯು ಕೈಗೊಳ್ಳಬೇಕಾದ ಚಟುವಟಿಕೆಗಳು, ಯೋಜನೆಗಳ ಕರಿತು ಚರ್ಚಿಸಲಾಯಿತು. ಸರಸಂಘಚಾಲಕ (ಮುಖ್ಯಸ್ಥ) ಮೋಹನ್‌ ಭಾಗವತ್‌ ಹಾಗೂ ಅಖಿಲ ಭಾರತೀಯ ಕಾರ್ಯಕರ್ತರ ಪ್ರವಾಸದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.