ಬೆಂಗಳೂರು :

“ಬರುವ ಜ. 12 ರಂದು ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ”‘ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಈ ಕಾರ್ಯಕ್ರಮದ ವಿಚಾರವಾಗಿ ನಮ್ಮ ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡಿದ್ದೇವೆ” ಎಂದು ತಿಳಿಸಿದರು.

*ಕೋವಿಡ್ ಭಯ ಬೇಡ:*

ಕೋವಿಡ್ ಸೋಂಕು ಹೆಚ್ಚಳ ವಿಚಾರವಾಗಿ ಕೇಳಿದಾಗ, “ಕೋವಿಡ್ ವಿಚಾರವಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಜಾಗೃತರಾಗಿರೋಣ. ಹೆಚ್ಚಿನ ಪರೀಕ್ಷೆ ನಡೆಸುತ್ತಿದ್ದೇವೆ. ಹಿರಿಯ ನಾಗರಿಕರು, ಯುವಕರು ಜಾಗೃತರಾಗಿರಬೇಕು. ನಾವು ವ್ಯಾಪಾರ, ವ್ಯವಹಾರಕ್ಕೆ ಯಾವುದೇ ನಿರ್ಬಂಧ ಹಾಕುವುದಿಲ್ಲ” ಎಂದು ತಿಳಿಸಿದರು.

ಶಿವಾನಂದ ಪಾಟೀಲ್ ಅವರ ಕ್ಷಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, “ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಅವರ ಜತೆ ನಾನು ಮಾತನಾಡುತ್ತೇನೆ. ನಮ್ಮ ಅಧಿಕಾರದ ಅವಧಿಯಲ್ಲಿ ಯಾರ ಮನಸ್ಸಿಗೂ ನೋಯಿಸುವ ಉದ್ದೇಶವಿಲ್ಲ. ರೈತರು ನಮಗೆ ಅಧಿಕಾರ ನೀಡಿದ್ದು, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.