ಮುಂಬೈ : ಕರ್ನಾಟಕ ಸರ್ಕಾರವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಂಬೈನ ಭೀವಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಯಾನಂದ ಚೋರ್ಕೆ ಹಾಗೂ ಚಾಂದಿವಾಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರಿಫ್ ನಸೀಂ ಖಾನ್ ಅವರ ಪರ ಶುಕ್ರವಾರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
“ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭೂಮಿಗೆ ಬಂದಿರುವುದಕ್ಕೆ ಸಂತೋಷವಾಗಿದೆ. ಈ ಇಬ್ಬರು ದೇಶಕ್ಕಾಗಿ ದೊಡ್ಡ ಕ್ರಾಂತಿ ಮಾಡಿದ ನಾಯಕರು.
ಕರ್ನಾಟಕದಲ್ಲಿ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬ ಹಾಗೂ ಮಹಿಳೆಯರು ಪರದಾಡುವಂತಾಗಿದೆ ಎನ್ನುವುದು ಹಲವಾರು ಚರ್ಚೆಗಳಿಂದ ತಿಳಿದರು. ಹೀಗಾಗಿ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆವು.
ಈ ಯೋಜನೆಗಳ ಜಾರಿ ಅಸಾಧ್ಯವೆಂದು ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರು ಹೇಳಿದರು. ಆದರೆ ನಮ್ಮ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದ ನಂತರ ಎಲ್ಲಾ ವರ್ಗದ ಮಹಿಳೆಯರು ನಮ್ಮ ಸರ್ಕಾರವನ್ನು ಪ್ರಶಂಸಿಸುತ್ತಿದ್ದಾರೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಮಹಿಳೆಯರಿಗೆ 1500 ರೂ. ನೀಡಲು ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದ್ದು, ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಕಳೆದ 15 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ 1.21 ಕೋಟಿ ಮಹಿಳೆಯರು ಪ್ರತಿ ತಿಂಗಳು 2 ಸಾವಿರ ಹಣ ಪಡೆಯುತ್ತಿದ್ದಾರೆ.
ಅಧಿಕಾರಕ್ಕೆ ಬಂದ ಮೊದಲ ದಿನವೇ ನಮ್ಮ ಸರ್ಕಾರ ಈ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಮಹಾರಾಷ್ಟ್ರದಲ್ಲಿ ಯುವಕರಿಗೆ ಪ್ರತಿ ತಿಂಗಳು 4 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಉದ್ಧವ್ ಠಾಕ್ರೆ, ಶರದ್ ಪವಾರ್ ಅವರು ಒಟ್ಟಾಗಿ ಈ ಚುನಾವಣೆ ಎದುರಿಸಲಿದ್ದು, ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ಚೋರ್ಕೆ ಅವರಿಗೆ ಆಶೀರ್ವಾದ ಮಾಡಬೇಕು.”