ಬೆಳಗಾವಿ ಅಧಿವೇಶನದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಾಗದಲ್ಲಿರುವ ಗಾಂಧಿ ಬಾವಿಯಲ್ಲಿನ ನೀರನ್ನು ತೆಗೆದು ಕರ್ನಾಟಕ ರಾಜ್ಯಕ್ಕೆ ಅಂಟಿರುವ ಕೊಳೆ ತೆಗೆಯಬೇಕು ಎಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನೀರು ಹಾಕಿ ಗುಡಿಸಿದ್ದೆವು.
ತದನಂತರ ಚಿಕ್ಕೋಡಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಯೊಬ್ಬರ ಮನೆ ಬೆಳಗಬೇಕು ಎಂದು ಗೃಹಜ್ಯೋತಿ ಕಾರ್ಯಕ್ರಮ ಘೋಷಿಸಿದ್ದೆವು.

ಬೆಂಗಳೂರು :
“ಗಾಂಧೀಜಿ ಅವರು ನಮಗೆ ಶಾಂತಿಯ ಮಾರ್ಗದರ್ಶನ ಕೊಟ್ಟಿದ್ದಾರೆ. ಆದರೆ ಕೆಲವರು ರಾಜಕೀಯಕ್ಕಾಗಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹುತಾತ್ಮ ದಿನಾಚರಣೆಯಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಂಗಳವಾರ ಮಾತನಾಡಿದ ಅವರು ಹೇಳಿದ್ದಿಷ್ಟು;

“ನಮಗೆ ಶಾಂತಿಯೇ ಮಂತ್ರ. ಆದರೆ ಶಾಂತಿಯನ್ನು ಕದಡಲು ಬಿಜೆಪಿ- ಜನತಾದಳದವರು ಕೂಡಿ ಹೊರಟಿದ್ದಾರೆ. ಈ ಇಬ್ಬರೂ ಕಪಟ ನಾಟಕದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ.

ಒಂದಷ್ಟು ಜನ ಹೊಸದಾಗಿ ಕೇಸರಿ ಧ್ವಜ ಹಿಡಿಯಲು ಹೊರಟಿದ್ದಾರೆ. ಹರ್ ಗರ್ ತಿರಂಗಾ ಮಾಡಿದ್ದರು. ಈಗ ಮಂಡ್ಯದಲ್ಲಿ ಕೇಸರಿ ಧ್ವಜದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ರಾಷ್ಟ್ರಧ್ವಜ, ಕನ್ನಡ ಧ್ವಜ ಬೇಡ ಎಂದು ಹೊಸ ಧ್ವಜ ಹಿಡಿಯುತ್ತಿದ್ದಾರೆ. ಅವರು ತಮ್ಮ ಮನೆಗಳ ಮೇಲೆ ತಮಗೆ ಬೇಕಾದ ಧ್ವಜ ಹಾಕಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇರುವ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಬೇಕು ಅಲ್ಲವೇ?

*ಗಾಂಧಿ ಅವರ ಅಹಿಂಸೆ, ಶಾಂತಿ ತತ್ವವನ್ನು ವಿಶ್ವವೇ ಒಪ್ಪಿದೆ:*

ಗಾಂಧಿಯವರು ಹುತಾತ್ಮರಾಗಿ 76 ವರ್ಷಗಳಾದರೂ ಅವರು ತಮ್ಮ ಚಿಂತನೆಗಳಿಂದ ಜೀವಂತವಾಗಿದ್ದಾರೆ. ಪ್ರಪಂಚದ ಪ್ರಮುಖ ನಾಯಕರು ಮತ್ತು ಎಲ್ಲಾ ದೇಶಗಳು ಗಾಂಧಿಯವರ ಅಹಿಂಸೆಯ ಮತ್ತು ಶಾಂತಿಯ ಸೂತ್ರವನ್ನು ಒಪ್ಪಿವೆ.

ಕಾಂಗ್ರೆಸ್ ಕಾರ್ಯಕರ್ತರು ಗಾಂಧಿಯ ಕುಟುಂಬದವರು. ಗಾಂಧೀಜಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ತಂದುಕೊಟ್ಟಿದೆ.

ಬೆಳಗಾವಿ ಅಧಿವೇಶನದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಾಗದಲ್ಲಿರುವ ಗಾಂಧಿ ಬಾವಿಯಲ್ಲಿನ ನೀರನ್ನು ತೆಗೆದು ಕರ್ನಾಟಕ ರಾಜ್ಯಕ್ಕೆ ಅಂಟಿರುವ ಕೊಳೆ ತೆಗೆಯಬೇಕು ಎಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನೀರು ಹಾಕಿ ಗುಡಿಸಿದ್ದೆವು.

ತದನಂತರ ಚಿಕ್ಕೋಡಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಯೊಬ್ಬರ ಮನೆ ಬೆಳಗಬೇಕು ಎಂದು ಗೃಹಜ್ಯೋತಿ ಕಾರ್ಯಕ್ರಮ ಘೋಷಿಸಿದ್ದೆವು. ಇಂದು 1.50 ಕೋಟಿ ಕುಟುಂಬಗಳ ಮನೆಗಳಲ್ಲಿ ಜ್ಯೋತಿ ಬೆಳಗುತ್ತಿದೆ.

ಗಾಂಧಿಯವರ ಗ್ರಾಮಸ್ವರಾಜ್ಯವನ್ನು ನಾವು ನನಸು ಮಾಡಿದ್ದೇವೆ. ಹಳ್ಳಿಗೆ ಒಂದು ಪಂಚಾಯಿತಿ, ಶಾಲೆ, ಸಹಕಾರ ಸಂಘವನ್ನು ಸ್ಥಾಪಿಸಿದ್ದೇವೆ. ಅವರ ಆಶಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

ಕಳೆದ ಅಧಿಕಾರವಧಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಗದಗದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿತ್ತು. ಇಲ್ಲಿ ಗುಜರಾತಿನ ಸಬರಮತಿ ಆಶ್ರಮದ ಪ್ರತಿರೂಪವನ್ನು ನಿರ್ಮಾಣ ಮಾಡಿದ್ದೇವೆ. ಗಾಂಧಿಯವರು ಆಶಯಗಳನ್ನು ಜೀವಂತವಾಗಿಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ.

*ರಾಮನ ಭಕ್ತ ಹನುಮಂತನಂತೆ ಕಾಂಗ್ರೆಸಿಗರು ಜನಸೇವೆ ಮಾಡಬೇಕು:*

ಶಸ್ತ್ರಗಳನ್ನು ಹಿಡಿದು ಯುದ್ಧಗಳನ್ನು ಗೆಲ್ಲಬಹುದು, ಆದರೆ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ಗಾಂಧಿಯವರ ಮಾರ್ಗದಲ್ಲಿ ಕಾರ್ಯಕರ್ತರು ಜನರ ಮನಸ್ಸು ಗೆಲ್ಲಬೇಕು. ಗಾಂಧಿಯವರ ಸರ್ವೋದಯ ಕಲ್ಪನೆ ಮತ್ತು ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಪರಿಕಲ್ಪನೆಯಲ್ಲೇ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳನ್ನು ಪ್ರಚಾರ ಮಾಡಬೇಕು.

ಕಾಂಗ್ರೆಸ್ಸಿಗರು ಸೇವೆಯ ಮೂಲಕ ಜನರನ್ನು ಗೆಲ್ಲಬೇಕು. ಹನುಮ ರಾಮನ ಸೇವೆ ಮಾಡಿದಂತೆ. ಜನರ ಸೇವೆ ಮಾಡಬೇಕು. ನಾವುಗಳು ರಾಮನ ಭಕ್ತ ಹನುಮಂತನಾಗಬೇಕು. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಸೆಳೆಯುವುದೇ ನಮ್ಮ ಉತ್ತರವಾಗಬೇಕು. ಆಗ ಮಾತ್ರ ಎಲ್ಲರೂ ನಾಯಕರಾಗಲು ಸಾಧ್ಯ. ಕೇವಲ ನನ್ನ ಬಳಿ ಬಂದು ಫೋಟೋ ತೆಗೆದುಕೊಂಡರೆ ಪ್ರಯೋಜನವಾಗುವುದಿಲ್ಲ.

*To handle yourself, use your head, to handle others, use your heart* ಅಂದರೆ ನಿನ್ನನ್ನು ನೀನು ನಿಯಂತ್ರಣ ಮಾಡಿಕೊಳ್ಳಲು ಮೆದುಳನ್ನು ಉಪಯೋಗಿಸು, ಬೇರೆಯವರನ್ನು ಗೆಲ್ಲಲು ಹೃದಯವನ್ನು ಬಳಸು ಎನ್ನುವ ಗಾಂಧಿಯವರ ಮಾತಿನಂತೆ ನಾವು ನಡೆಯೋಣ.

ಸಿದ್ದರಾಮಯ್ಯ ಅವರ ಸರ್ಕಾರ ನುಡಿದಂತೆ ನಡೆದು ದೇಶಕ್ಕೆ ಮಾದರಿಯಾಗಿದ್ದೇವೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಸೆಳೆಯಬೇಕು. ತಾಳ್ಮೆ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಡಿ ಕೋಮುವಾದಿಗಳನ್ನು ದೂರವಿಡೋಣ.