ಸ್ಟೇಷನ್ ಘಣಪುರ (ತೆಲಂಗಾಣ):
“ತೆಲಂಗಾಣದಲ್ಲಿ ಹತ್ತು ವರ್ಷಗಳಿಂದ ಕೆಸಿಆರ್‌ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟದಲ್ಲಿ 6 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ತೆಲಂಗಾಣದ ಸ್ಟೇಷನ್ ಘಣಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

“ನಾವು ಕರ್ನಾಟಕದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದೇವೆ. ತೆಲಂಗಾಣದಲ್ಲಿ ನಾವು ನೀಡಿರುವ 6 ಗ್ಯಾರಂಟಿ ಯೋಜನೆಗಳು ಈ ರಾಜ್ಯದ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡುತ್ತದೆ. ಎಲ್ಲಾ ವರ್ಗದ ಜನರಿಗೆ ನಮ್ಮ ಯೋಜನೆಗಳು ನೆರವಾಗಲಿದೆ. ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ನಮ್ಮ ಯೋಜನೆಗಳು ನೆರವಾಗಲಿವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ.

ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರೂಪುಗೊಳ್ಳಲು ಸೋನಿಯಾ ಗಾಂಧಿಯವರ ಕೊಡುಗೆ ಇದೆ. ಈಗ ತೆಲಂಗಾಣದ ಜನರು ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಬಂದಿದೆ. ಕೆಸಿಆರ್ ಅವರಿಗೆ ಜನ 10 ವರ್ಷಗಳ ಕಾಲ ಅಧಿಕಾರ ನೀಡಿದ್ದು, ಈ ಅವಧಿಯಲ್ಲಿ ಅವರು ವಿಫಲರಾಗಿದ್ದಾರೆ. ಈ ರಾಜ್ಯದ ಜನರು ಈಗ ಕೂಡ ಬದಲಾವಣೆ ಬಯಸಿದ್ದಾರೆ.”

ಕರ್ನಾಟಕ ಮಾದರಿ ತೆಲಂಗಾಣದಲ್ಲಿ ಯಶಸ್ಸು ಸಾಧಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕೆಸಿಆರ್ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಡಿ.9ರಂದು ಸೋನಿಯಾ ಗಾಂಧಿಯವರ ಹುಟ್ಟುಹಬ್ಬವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ 6 ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಿಡಿಸಿದರು.

ತೆಲಂಗಾಣದಲ್ಲಿ ಪ್ರಚಾರ ಮಾಡುತ್ತಿರುವ ನಿಮಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಕೇಳಿದಾಗ, “ಈ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತಿದ್ದು ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಇತರೆ ಪಕ್ಷಗಳು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಜನ ಕೆಸಿಆರ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡಲಿದ್ದಾರೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಬೇರೆ ಪಕ್ಷಗಳ ಯೋಜನೆ ನಕಲು ಮಾಡಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ನಾವು ಯಾರನ್ನು ನಕಲು ಮಾಡಿಲ್ಲ. ಕರ್ನಾಟಕದಲ್ಲಿ ನಾವು ಗ್ಯಾರಂಟಿಗಳನ್ನ ನೀಡಿದ ಮೇಲೆ ಕೆಸಿಆರ್ ಹಾಗೂ ಮೋದಿ ಅವರು ನಕಲು ಮಾಡುತ್ತಿದ್ದಾರೆ. ಮೊದಲು ಮೋದಿ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡಿದ್ದರು. ಈಗ ಬಿಜೆಪಿಯವರು ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೋದಿ ಸರ್ಕಾರ ಕೂಡ ಕೆಸಿಆರ್ ಸರ್ಕಾರದಲ್ಲಿ ತೆಲಂಗಾಣ ಅತ್ಯಂತ ಭ್ರಷ್ಟ ರಾಜ್ಯವಾಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಇದಕ್ಕೆ ಕೆಸಿಆರ್ ಉತ್ತರ ನೀಡಬೇಕು. ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಹಿಂಬಾಗಿಲಿನಿಂದ ಕೆಸಿಆರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷ ಅಧಿಕಾರದಲ್ಲಿದ್ದರೆ ಬದಲಾವಣೆ ತರಲು ಸಾಧ್ಯ. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳು ತೆಲಂಗಾಣ ಜನರ ಭವಿಷ್ಯವನ್ನು ಬದಲಿಸಲಿದೆ. ಹೀಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು” ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಒಳಜಗಳ ಇದ್ದು, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕೇಳಿದಾಗ, “ಕಾಂಗ್ರೆಸ್‌ನಲ್ಲಿ ಯಾವುದೇ ಒಳಜಗಳವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಕರ್ನಾಟಕದಲ್ಲಿ ನಿರ್ಧಾರ ಮಾಡಿದಂತೆ ನಮ್ಮ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಯಾರು ಎಂದು ತೀರ್ಮಾನ ಮಾಡಲಿದ್ದಾರೆ” ಎಂದು ತಿಳಿಸಿದರು.