ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ನಮ್ಮ ಪಕ್ಷದ ನಾಯಕರುಗಳು ಹಾಗೂ ಕಾರ್ಯಕರ್ತರಿಗೆ ಹೇಳಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಶನಿವಾರದಂದು ಕ್ಷೇತ್ರದ ನಾಯಕರು ಹಾಗೂ ಕಾರ್ಯಕರ್ತರ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಚನ್ನಪಟ್ಟಣ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವೇನು ಎಂದು ಕೇಳಿದಾಗ, “ಅವರೆಲ್ಲರೂ ನನ್ನ ಜನ. ಪಕ್ಷದಿಂದ ಯಾರು ನಿಲ್ಲುತ್ತಾರೆ ಎಂದು ನೋಡಬೇಡಿ. ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ಕೆಲಸ ಮಾಡಿ. ವಿರೋಧ ಪಕ್ಷದ ನಾಯಕರು ಹೆದರಿ ಶರಣಾಗುತ್ತಿದ್ದಾರೆ. ಅವರು ಅಷ್ಟು ದುರ್ಬಲರಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ರಾತ್ರಿಯೆಲ್ಲಾ ಸಭೆಗಳು ನಡೆದಿವೆ. ಜೆಡಿಎಸ್ ನವರೇ ಸೀಟು ಬಿಟ್ಟುಕೊಡುತ್ತಿದ್ದಾರೆ ಎಂದು ಯಾರೋ ಕರೆ ಮಾಡಿ ಹೇಳಿದರು. ಅದು ಎಷ್ಟು ಸತ್ಯವೋ ನನಗೆ ಗೊತ್ತಿಲ್ಲ. ಇರಲಿ, ಅವರು ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.

ಮೈತ್ರಿಯಿಂದ ಯಾರಾದರೂ ಅಚ್ಚರಿ ಅಭ್ಯರ್ಥಿ ನಿಮ್ಮ ಪಕ್ಷಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ, “ಆ ಬಗ್ಗೆ ನನಗೆ ಗೊತ್ತಿಲ್ಲ, ನೋಡೋಣ. ಮೊದಲು ನಮ್ಮ ಕಾರ್ಯಕರ್ತರ ಬಳಿ ನಾನು ಚರ್ಚೆ ಮಾಡುತ್ತಿದ್ದೇನೆ. ಅವರಿಗೆ ಏನು ಹೇಳಬೇಕೋ ಹೇಳುತ್ತಿದ್ದೇನೆ. ಅವರ ಅಭಿಪ್ರಾಯ ಕೇಳಿದ್ದೇನೆ. ರಾಜಕಾರಣ ಸಾಧ್ಯತೆಗಳ ಕಲೆ. ಯಾರು ಬೇಕಾದರೂ ಗೆಲ್ಲಬಹುದು ಯಾರೂ ಗಾಬರಿಯಾಗುವುದು ಬೇಡ. ಪ್ರಧಾನಮಂತ್ರಿಗಳ ಕ್ಷೇತ್ರವನ್ನೇ ನಾವು ರಾಮನಗರದಲ್ಲಿ ಗೆದ್ದಿದ್ದೇವೆ. ಹೀಗಾಗಿ ಕಂಗೆಡಬೇಡಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರು ನೀವು ತಯಾರಿರಬೇಕು ಎಂದು ತಿಳಿಸಿದ್ದೇನೆ” ಎಂದು ತಿಳಿಸಿದರು.

ಸಭೆಯಲ್ಲಿ ಬಹಳಷ್ಟು ಮಂದಿ ಡಿ.ಕೆ. ಸುರೇಶ್ ಅವರ ಹೆಸರು ಹೇಳುತ್ತಿದ್ದರು ಎಂದು ಕೇಳಿದಾಗ, “ಅವರು ಹೇಳುತ್ತಾರೆ. ಸುರೇಶ್ ಅವರಿಗೂ ನಾನು ಜವಾಬ್ದಾರಿ ನೀಡುತ್ತೇನೆ. ಅವರದೂ ಹಲವಾರು ಲೆಕ್ಕಾಚಾರ ಇರುತ್ತದೆ. ನೋಡೋಣ” ಎಂದರು.

ಸುರೇಶ್ ಅವರಿಗೆ ಸ್ಪರ್ಧಿಸುವಂತೆ ಮನವೊಲಿಸುತ್ತೀರಾ ಎಂದು ಕೇಳಿದಾಗ, “ನಾವು ಯಾರ ಮನಸನ್ನು ಒಲಿಸುವುದಿಲ್ಲ. ನಾವು ಇವರೇ ನಮ್ಮ ಅಭ್ಯರ್ಥಿ ಎಂದು ಹೇಳಿದರೆ ಎಲ್ಲರೂ ಒಪ್ಪುತ್ತಾರೆ” ಎಂದು ತಿಳಿಸಿದರು.

ಗೆದ್ದಿರುವ ಕ್ಷೇತ್ರ ಬಿಟ್ಟುಕೊಡುತ್ತಿದ್ದಾರೆ ಎಂದರೆ ಹೆದರಿದ್ದಾರೆ ಎಂದು ಅರ್ಥವಲ್ಲವೇ, ನೀವು ಕೂಡ ಚನ್ನಪಟ್ಟಣಕ್ಕೆ ಹೋಗುತ್ತಿದ್ದೀರಿ ಎಂದು ಕೇಳಿದಾಗ, “ಅವರು ನನ್ನ ಜನ. ನಾನು ಹೋಗದೆ ಇನ್ಯಾರು ಹೋಗುತ್ತಾರೆ. ಅವರ ಬಗ್ಗೆ ನನಗೆ ವಿಶ್ವಾಸವಿದೆ. ಅವರ ಸೇವೆ ಮಾಡಲು ನಾನು ಹೋಗುತ್ತಿದ್ದೇನೆ” ಎಂದರು.

ನೀವು ವೇದಿಕೆ ಸಿದ್ಧಪಡಿಸಿರುವುದನ್ನು ಕಂಡು ಅವರು ಗಾಬರಿಯಾಗಿದ್ದಾರಾ ಎಂದು ಕೇಳಿದಾಗ, “ಅವರು ಗಾಬರಿಯಾಗುವುದಿಲ್ಲ. ಅವರು ಇಷ್ಟು ದುರ್ಬಲ ಎಂದು ನಾನು ಭಾವಿಸಿರಲಿಲ್ಲ” ಎಂದರು.

ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದಾರಾ ಎಂದು ಕೇಳಿದಾಗ, “ಇದೇ ಪ್ರಶ್ನೆಯನ್ನು ನೀವು ಅವರ ಬಳಿ ಕೇಳಬೇಕು” ಎಂದು ತಿಳಿಸಿದರು.