ಬೆಂಗಳೂರು :
“ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;

ಕಳೆದ 3 ವರ್ಷಗಳಲ್ಲಿ 6 ಸಾವಿರಕ್ಕೂ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಎನ್‌ಸಿ‌ಆರ್‌ಬಿ ಅಂಕಿಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು.

ಜೀವನದಲ್ಲಿ ಧೈರ್ಯ ಇರಬೇಕು ಆದರೆ ಭಂಡತನ ಇರಬಾರದು. ಜೀವ ಅಮೂಲ್ಯವಾದುದು, ಒಮ್ಮೆ ಹೋದ ಜೀವ ಮತ್ತೆ ಬರುವುದಿಲ್ಲ. ಸಂಚಾರಿ ನಿಯಮ ಪಾಲನೆಯ ಬಗ್ಗೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಾಗಿದೆ. ಕಾನೂನು ಪಾಲನೆ, ಶಿಸ್ತು, ಸಂಯಮ ಸೇರಿದಂತೆ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಬಾರದು ಎಂದು ಮಕ್ಕಳಲ್ಲಿ ಅರಿವು ಮೂಡಿಸಲು ‘ಮೊಳಕೆಯಲ್ಲೇ ತಿದ್ದಿರಿ’ ಎನ್ನುವ ಕೈಪಿಡಿಯನ್ನು ಬಿಡುಗಡೆ ಮಾಡಿಲಾಗಿದೆ.

ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ಹರೀಶ್ ಸಾಂತ್ವನ ಯೋಜನೆ ಜಾರಿಗೆ ತಂದಿತ್ತು. ಆದರೆ ಅಪಘಾತವಾಗಿ ಹೋದ ಜೀವ ಮತ್ತೆ ಮರಳಿ ತರಲು ಸಾಧ್ಯವೇ? ಫುತ್‌ಪಾತ್ ಮೇಲೆ ಗಾಡಿ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡಿ ವಾಹನ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ.

*ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ*

ಸುಮಾರು 24 ಲಕ್ಷ ಕುಟುಂಬಗಳು ಬೆಂಗಳೂರಿನಲ್ಲಿ ವಾಸವಿದ್ದು, 1 ಕೋಟಿಗೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಯುವ ಪೀಳಿಗೆ ಜವಾಬ್ದಾರಿ ಅರಿತು ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಾರಿಗೆ ಇಲಾಖೆ, ಬಿಬಿಎಂಪಿ, ಪೊಲೀಸ್ ಇಲಾಖೆಗಳು ಸೇರಿ ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿವಾರಣೆಗೆ ಇತರೇ ದೇಶಗಳಲ್ಲಿ ಇರುವ ಯೋಜನೆಗಳನ್ನು ಅಧ್ಯಯನ ಮಾಡಿ ಇಲ್ಲಿ ಅಳವಡಿಸುವ ಕೆಲಸ ಮಾಡಲಾಗುತ್ತಿದೆ.

*ಕೋರ್ಟ್ ಆದೇಶದಂತೆ ಫುಟ್ ಪಾತ್ ವ್ಯಾಪಾರಿಗಳ ತೆರವು:*

ಕಾರ್ಯಕ್ರಮದ ನಂತರ ಮಾಧ್ಯಮಗಳು ಜಯನಗರದಲ್ಲಿ ಬೀದಿ ವ್ಯಾಪಾರಿಗಳ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ,
“ಪಾದಚಾರಿಗಳ ಅನುಕೂಲ, ಸುಗಮ ಸಂಚಾರಕ್ಕಾಗಿ ಹೈಕೋರ್ಟ್ ಆದೇಶದಂತೆ ಫುಟ್ ಪಾತ್ ವ್ಯಾಪಾರಿಗಳ ತೆರವು ಮಾಡಲಾಗಿದೆ. ಪಾದಚಾರಿ ಮಾರ್ಗ ಇರುವುದು ಜನ ಓಡಾಡಲು. ಇಂತಹ ವ್ಯಾಪಾರಿಗಳು ನೋಂದಣಿ ಮಾಡಿಕೊಂಡು ರಸ್ತೆಯ ಒಂದು ಕಡೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಅವರಿಗೆ ಆರ್ಥಿಕ ನೆರವು ನೀಡಲು ನಾವು ಸಿದ್ಧ. ಆದರೆ ಪಾದಚಾರಿ ಮಾರ್ಗದಲ್ಲಿ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡಿದರೆ ಪಾದಚಾರಿಗಳು ಎಲ್ಲಿ ಓಡಾಡಬೇಕು” ಎಂದು ತಿಳಿಸಿದರು.

*ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ:*

ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧೆ ಮಾಡುವ ಚರ್ಚೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನಿಮಗೆ ಮಾಹಿತಿ ಇರಬಹುದು. ನನಗೆ ಮಾಹಿತಿ ಇಲ್ಲ, ನನ್ನ ಜತೆ ಯಾರು ಮಾತನಾಡಿಲ್ಲ” ಎಂದು ತಿಳಿಸಿದರು.

ರಾಜ್ಯದಲ್ಲಿ ಭದ್ರತೆ ಇಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಅವರ ಕಾಲದಲ್ಲಿ ಆದದ್ದನ್ನು ಅವರು ಹೇಳುತ್ತಿದ್ದಾರೆ. ನಾವು ಯಾವುದೇ ಹಂತದಲ್ಲೂ ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

*ಅನುಭವ ಮಂಟಪ ಯೋಜನೆ ಆರಂಭಿಸಿದ್ದೇ ಕಾಂಗ್ರೆಸ್*

ಅನುಭವ ಮಂಟಪಕ್ಕೆ ಅನುದಾನ ನೀಡುತ್ತಿಲ್ಲ ಎಂಬ ಬಸವ ಕಲ್ಯಾಣ ಶಾಸಕರ ಆರೋಪದ ಬಗ್ಗೆ ಕೇಳಿದಾಗ, ಅವರು ಹೊಸದಾಗಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿಗಳು ನಿನ್ನೆ ಶಿವಮೊಗ್ಗದಲ್ಲಿ ಅಲ್ಲಮ ಪ್ರಭುಗಳ ಹೆಸರನ್ನು ಘೋಷಣೆ ಮಾಡಿದ್ದಾರೆ. ನಮ್ಮ ಆಸಕ್ತಿಗೆ ಇದೆ ಸಾಕ್ಷಿ. ಇದನ್ನು ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಅವರ ಕಾಲದಲ್ಲಿ ಯಾಕೆ ಅನುದಾನ ಬಿಡುಗಡೆ ಮಾಡಲಿಲ್ಲ” ಎಂದು ತಿರುಗೇಟು ನೀಡಿದರು.