ಬೆಂಗಳೂರು : ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ರಾಜ್ಯಗಳೇ ನಡೆಸಲು ಅವಕಾಶ ಮಾಡಿಕೊಡುವುದು ಉತ್ತಮ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಶನಿವಾರ ಹೇಳಿದ್ದಿಷ್ಟು;
“ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ನೀಟ್ ಅಕ್ರಮ ಗಂಭೀರ ಅಪರಾಧವಾಗಿದೆ. ಹೀಗಾಗಿ ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಲಿ ಎಂದು ಕೇಂದ್ರವನ್ನು ಮನವಿ ಮಾಡುತ್ತೇನೆ. ರಾಜ್ಯಗಳು ನಡೆಸುವ ಪರೀಕ್ಷೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಲಿ. ಅವರಿಗಾಗಿ ಮೀಸಲಾತಿಯನ್ನೂ ನೀಡಬಹುದು.
ಈ ಪರೀಕ್ಷೆಯಿಂದ ನಮ್ಮ ರಾಜ್ಯದ ಮಕ್ಕಳಿಗೆ ದೊಡ್ಡ ಅನ್ಯಾಯವಾಗುತ್ತಿವೆ. ನಾವು ಕಾಲೇಜುಗಳನ್ನು ಕಟ್ಟಿದ್ದೇವೆ. ನೀಟ್ ಪರೀಕ್ಷೆಯಿಂದ ಉತ್ತರ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಮ್ಮ ಮಕ್ಕಳಿಗೆ ತಾರತಮ್ಯವಾಗುತ್ತಿದೆ. ನಮ್ಮ ಮಕ್ಕಳಿಗೆ ನ್ಯಾಯ ಒದಗಿಸಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇನ್ನು ನೀಟ್ ಅಕ್ರಮದ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಯಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದರು.
*ಸುಳ್ಳಿಗೆ ಮತ್ತೊಂದು ಹೆಸರೆ ಬೊಮ್ಮಾಯಿ ಎನ್ನುವಂತಾಗದಿರಲಿ:*
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಪ್ರಸ್ತಾವನೆಯೇ ಸರಿಯಾಗಿಲ್ಲ ಎಂಬ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸುಳ್ಳಿಗೆ ಮತ್ತೊಂದು ಹೆಸರೇ ಬೊಮ್ಮಾಯಿ ಅವರು ಎನ್ನುವಂತಾಗುತ್ತಿದೆ. ಇದು ಆಗಬಾರದು. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಬಜೆಟ್ ಅಲ್ಲಿ ಅವರು ಸೇರಿಸಿಕೊಂಡರು. ನಮ್ಮ ಪ್ರಸ್ತಾವನೆ ಸರಿಯಾಗಿಲ್ಲ ಎಂದಾದರೆ ಅವರ ಬಳಿಯೇ ಹೋಗಿ ಹೇಗೆ ಬರೆಯಬೇಕು ಎಂದು ಅವರಿಂದಲೇ ಕೇಳಿ ಬರೆದು ಕೊಡುತ್ತೇವೆ. ಬೊಮ್ಮಾಯಿ ಅವರು ಸಹ ನೀರಾವರಿ ಸಚಿವರಾಗಿದ್ದವರು. ರಾಷ್ಟ್ರೀಯ ಯೋಜನೆ ಮಾಡಿ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕ್ಯಾಬಿನೆಟ್ ಮುಂದೆ ಇಟ್ಟುಕೊಂಡರೇ ಹೊರತು ಬೇಕಂತಲೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಿಲ್ಲ. ಮಾಜಿ ಸಂಸದರಾದ ನಾರಾಯಣಸ್ವಾಮಿ ಅವರು ನನ್ನ ಬಳಿ ಬಂದು ರಾಷ್ಟ್ರೀಯ ಯೋಜನೆಯಾಗಲಿ ಎಂದು ಬರೆಸಿಕೊಂಡು ಹೋದರು. ಸುಮ್ಮನೆ ಏನೇನೋ ಹೇಳಬಾರದು. ಬೊಮ್ಮಾಯಿ ಅವರು ಫೇಲ್ ಆಗಿದ್ದಾರೆ” ಎಂದು ತಿಳಿಸಿದರು.
*ಪಾಲಿಕೆ ಚುನಾವಣೆಗೆ ಪಕ್ಷದ ಸಂಘಟನೆ ಬಗ್ಗೆ ಚರ್ಚೆ:*
ಪಕ್ಷದ ಬೆಂಗಳೂರು ನಗರದ ಬ್ಲಾಕ್ ನಾಯಕರ ಜತೆ ಪಾಲಿಕೆ ಚುನಾವಣೆ ಸಿದ್ಧತೆ ಬಗ್ಗೆ ಸಭೆ ಮಾಡಿದ್ದೇವೆ. ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ತುಂಬಲು, ನಿಷ್ಕ್ರಿಯರಾಗಿರುವ ಪದಾಧಿಕಾರಿಗಳ ಜಾಗಕ್ಕೆ ಬೇರೆಯವರನ್ನು ನೇಮಿಸುವಂತೆ ಸೂಚನೆ ನೀಡಿದ್ದು ಒಂದು ತಿಂಗಳ ಕಾಲಾವಕಾಶ ನೀಡಿದ್ದೇವೆ. ಪಾಲಿಕೆ ಚುನಾವಣೆ ಶೀಘ್ರವೇ ಪ್ರಕಟವಾಗಲಿದ್ದು, ಅಷ್ಟರ ಹೊತ್ತಿಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಬೆಂಗಳೂರು ನಗರದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ನಾವು ಸೋತಿರಬಹುದು, ಆದರೆ ಪಾಲಿಕೆ ಚುನಾವಣೆಯಲ್ಲಿ ನಾವು ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ.
ಯಡಿಯೂರಪ್ಪ ಅವರ ಪ್ರಕರಣದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಇದು ಕಾನೂನಿನ ಪ್ರಕ್ರಿಯೆ. ಬಿಜೆಪಿ ನಾಯಕರು ನಮ್ಮ ಹೆಸರು ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಅವರಿಗೂ ಗೊತ್ತಿದೆ. ಆದರೂ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ಈ ವಿಚಾರವಾಗಿ ನಾವು ಮಾತನಾಡುವುದು ಸರಿಯಲ್ಲ” ಎಂದರು.
ಅಶೋಕ್ ಅವರ ಟೀಕೆ ಬಗ್ಗೆ ಕೇಳಿದಾಗ, “ಅಶೋಕ್ ಅವರು ಒಬ್ಬ ಸುಳ್ಳುಗಾರ ಹಾಗೂ ಜೋಕರ್. ಅವರು ಯಾವುದಾದರೂ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅನುಭವವನ್ನು ಈಗ ಹೇಳುತ್ತಿದ್ದಾರೆ” ಎಂದರು.
ನೀರಿನ ಅಭಾವದ ಕುರಿತಾಗಿ ಕೇಳಿದಾಗ, “ಬೆಂಗಳೂರಿನಲ್ಲಿ ಈಗ ನೀರಿನ ಸಮಸ್ಯೆ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ” ಎಂದರು.
*ಪ್ರತಿದಿನ ಕುಡಿಯುವ ನೀರಿನ ಪರೀಕ್ಷೇ ಕಡ್ಡಾಯ*
ಕಲುಷಿತ ನೀರಿನ ಬಗ್ಗೆ ಕೇಳಿದಾಗ “ಪ್ರತಿದಿನ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಜನರಿಗೆ ನೀಡಲಾಗುತ್ತಿದೆ. ಕಾವೇರಿ, ಬೋರ್ ವೆಲ್ ನೀರನ್ನು ಸಹ ಪರೀಕ್ಷೆಗೆ ಒಳಪಡಿಸುತ್ತಿದ್ದು. ದಿನದ ವರದಿ ನನಗೂ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು. ಪ್ರತಿದಿನವೂ ವರದಿ ನೀಡುತ್ತಿದ್ದಾರೆ.
ಬಿಬಿಎಂಪಿ ವಿಭಾಗಿಸುವ ಬಗ್ಗೆ ಬಿಜೆಪಿ ವಿರೋಧಿಸುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಮಿತಿಯ ವರದಿ ಇದೆ. ಸಧ್ಯಕ್ಕೆ 225 ವಾರ್ಡ್ ಗಳನ್ನು ಮಾಡಲಾಗಿದ್ದು, ಚುನಾವಣೆ ನಂತರವೂ ಬಿಬಿಎಂಪಿ ವಿಭಜನೆ ಮಾಡಬಹುದು. ಈಗಲೇ ಮಾಡಬೇಕೆಂದೇನಿಲ್ಲ” ಎಂದು ತಿಳಿಸಿದರು.
ಬಿಟ್ ಕಾಯಿನ್ ಹಗರಣ ಸಂಬಂಧ ನಲಪಾಡ್ ಅವರನ್ನು ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಕೇಳಿದಾಗ, “ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ” ಎಂದರು.
ಜಿಲ್ಲಾ ಪಂಚಾಯ್ತಿ ಚುನಾವಣೆ ಬಗ್ಗೆ ಕೇಳಿದಾಗ, “ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಾವು ಚುನಾವಣೆ ನಡೆಸಲೇಬೇಕು. ಹೀಗಾಗಿ ನಾವು ಎಲ್ಲಾ ಚುನಾವಣೆ ಮಾಡಲು ಬದ್ಧವಾಗಿದ್ದೇವೆ” ಎಂದರು.