ಪುತ್ತೂರು: ಪುತ್ತೂರಿನಲ್ಲಿ ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ, ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸುವುದು ಬಹುತೇಕ ಖಚಿತವಾಗಿದೆ. ಅವರ ಕಾರ್ಯಕ್ರಮದ ವೇಳಾಪಟ್ಟಿ ಇದೀಗ ಬಿಡುಗಡೆಯಾಗಿದೆ. ನವೆಂಬರ್ 2 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾವಿರಾರು ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಡಿ.ಕೆ.ಶಿವಕುಮಾರ್ ಆಗಮಿಸುವುದು ದೃಢಪಟ್ಟಿದೆ. ಅವರು ಬೆಂಗಳೂರಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣ ಮೂಲಕ ರಸ್ತೆ ಮಾರ್ಗವಾಗಿ ಪುತ್ತೂರು ಕಾರ್ಯಕ್ರಮಕ್ಕೆ ಆಗಮಿಸುವರು. ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ತೆರಳಲಿದ್ದಾರೆ.

ಅಶೋಕ ಜನಮನ ಕಾರ್ಯಕ್ರಮಕ್ಕೆ ಸಿ‌ಎಂ ,ಡಿಸಿಎಂ ಭಾಗವಹಿಸುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಎಸ್ ಪಿಯವರಿಂದ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಿ ಶಾಸಕ ಅಶೋಕ್ ರೈ ಜೊತೆ ಚರ್ಚೆ ನಡೆಸಿದರು.