ಮೈಸೂರು :ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ಡಿಡಿಪಿಐ ವಿಪರೀತ ನಗೆಪಾಟಲಿಗೆ ಈಡಾದರು.
ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮ ಈ ಘಟನೆ ಸಾಕ್ಷಿಯಾಗಿದೆ.ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆಯೇ ಎಂದು ಸಿಎಂ ಕೇಳಿದ ಪ್ರಶ್ನೆಗೆ ಹೂಂ ಸಾರ್-ಇಲ್ಲ ಸಾರ್ ಎಂದು ಉತ್ತರಿಸಿದರು. ನಿಮ್ಮ ಮಾತನ್ನು ಖಾಸಗಿ ಶಾಲೆಗಳವರು ಕೇಳುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಸಾರ್ ಎಂದು ಡಿಡಿಪಿಐ ಉತ್ತರಿಸಿದ್ದಕ್ಕೆ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಯಾವುದಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂದು ಸಿಎಂ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಡಿಡಿಪಿಐ ತಡಬಡಾಯಿಸಿದರು. ಆಗ ಮುಖ್ಯಮಂತ್ರಿಗಳೇ ಯಾವುದೇ ಒಂದು ಸ್ಕೂಲ್ ಹೆಸರು ಹೇಳಪ್ಪಾ ಹೋಗ್ಲಿ ಎಂದರು. ಆಗಲೂ ಸಭೆ ನಗೆಗಡಲಲ್ಲಿ ತೇಲಿತು. ಬೇಸತ್ತ ಮುಖ್ಯಮಂತ್ರಿಗಳು ನೀವು ಕಷ್ಟಪಟ್ಟು ಓದಿದ್ದೀರಾ ಎಂದು ಕೇಳಿದರೆ, ಇಲ್ಲ ಸಾರ್ ಎನ್ನುವ ಉತ್ತರ ಡಿಡಿಪಿಐ ಅವರಿಂದ ಬಂತು. ಆಗಲೂ ಸಭೆ ನಗೆ ಗಡಲಲ್ಲಿ ತೇಲಿತು.
ಕೊನೆಗೆ ಒಂದು ವಾರದಲ್ಲಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಖಡಕ್ ಆಗಿ ಡಿಸಿಪಿಐಗೆ ಸಿಎಂ ಸೂಚನೆ ನೀಡಿದರು.ಗ್ರೇಸ್ ಮಾರ್ಕ್ಸ್ ಇಲ್ಲದೆ ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಫಲಿತಾಂಶ ತರುವ ದಿಕ್ಕಿನಲ್ಲಿ ಎಲ್ಲಾ ಬಿಇಒ ಗಳ ಜೊತೆ ಸಭೆ ನಡೆಸಬೇಕು.
ಸ್ಪೆಷಲ್ ಕೋಚಿಂಗ್ ಕೊಟ್ಟು ಹಿಂದುಳಿದಿರುವ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸರಣಿ ಪರೀಕ್ಷೆಗಳು ಸೇರಿದಂತೆ ಹಲವು ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಗ್ರೇಸ್ ಮಾರ್ಕ್ಸ್ ಇಲ್ಲದೆ ಫಲಿತಾಂಶದ ಪ್ರಮಾಣ ಹೆಚ್ಚುವಂತೆ ಕೆಲಸ ಮಾಡಿ ಡಿಡಿಪಿಐ ಗೆ ಸಿಎಂ ಸೂಚಿಸಿದರು
***
• ಮೈಸೂರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ, ಅರೆ ಬರೆ ಕೆಲಸಗಳಾಗಿರುವ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಹಾಗೂ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಆಧ್ಯತೆಗಳ ಮೇಲೆ ಮುಗಿಸಬೇಕು. ಕ್ಯಾಬಿನೆಟ್ನಲ್ಲಿ ಒಪ್ಪಿಗೆ ದೊರೆತಿರುವ ಯೋಜನೆಗಳ ಟೆಂಡರ್ ಅವಧಿ ಮುಗಿಯುತ್ತಿದ್ದಂತೆ ಕ್ಷಿಪ್ರವಾಗಿ ಪ್ರಕ್ರಿಯೆ ತೀವ್ರಗೊಳಿಸುವಂತೆ ಸೂಚಿಸಿದರು.
• ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿರುವ ರಸ್ತೆ ಗುಂಡಿಗಳನ್ನು ಮೊದಲು ಸಮರ್ಪಕವಾಗಿ ಮುಚ್ಚಬೇಕು. ಮಳೆ ನಿಲ್ಲುತ್ತಿದ್ದಂತೆ ಹೊಸ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು. ವರುಣ, ನಂಜನಗೂಡು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗುವ ಹೆದ್ದಾರಿಯ ಕಾಮಗಾರಿಯ ಸ್ಥಿತಿ ಗತಿಯ ಮಾಹಿತಿ ಪಡೆದರು.
• ಮುಖ್ಯಮಂತ್ರಿಗಳ ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಮನವಿಗಳಲ್ಲಿ ಎಲ್ಲಾ ಅರ್ಹ ಮನವಿಗಳ ಕೆಲಸಗಳನ್ನು ಪೂರೈಸಿ, ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
• ಬಾಕಿ ಇದ್ದ ೩೫ ಸಾವಿರದಷ್ಟು ಪ್ರಕರಣಗಳನ್ನು ಅಭಿಯಾನ ಸ್ವರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಸದ್ಯ ೮೦೦ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.
• ಮೈಸೂರು ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮೈಸೂರಿನ ಚರಿತ್ರೆ ಮತ್ತು ಇತಿಹಾಸ ಸಾರುವ ಮ್ಯೂಸಿಯಂ ಆಗಿ ಮಾರ್ಪಡಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
• ಮೈಸೂರು ರಿಂಗ್ ರಸ್ತೆಯಲ್ಲಿನ ಬೀದಿ ದೀಪಗಳ ಸಮಸ್ಯೆಗಳನ್ನು ತುರ್ತಾಗಿ ತಕ್ಷಣವೇ ಸರಿಯಾಗಿ ದುರಸ್ತಿಪಡಿಸಿ ಎಂದು ಖಡಕ್ ಸೂಚನೆ ನೀಡಿದ ಮುಖ್ಯಮಂತ್ರಿಗಳು, ರಿಂಗ್ ರಸ್ತೆಯ ಸುತ್ತ ಸರ್ವೀಸ್ ರಸ್ತೆಯನ್ನು ನಿರ್ಮಿಸದಿರುವುದಕ್ಕೆ ಸಿಎಂ ವಿಪರೀತ ಗರಂ ಆದರು. ಇದುವರೆಗೂ ಸರ್ವೀಸ್ ರಸ್ತೆ ಏಕೆ ಮಾಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
• ಸರ್ವೀಸ್ ರಸ್ತೆಯನ್ನು ನಿರ್ಮಿಸಲು ಲಿಟಿಗೇಷನ್ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಕ್ಸಿಕ್ಯುಟೀವ್ ಎಂಜಿನಿಯರ್ ತಿಳಿಸಿದರು. ಇದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು, ಯಾವ ಲಿಟಿಗೇಷನ್ ಕೂಡ ಇಲ್ಲ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಎಲ್ಲವನ್ನೂ ಬಗೆ ಹರಿಸಲಾಗಿದೆ. ಮೊದಲು ಕೆಲಸ ಪ್ರಾರಂಭಿಸಿ ಎಂದು ತಾಕೀತು ಮಾಡಿದರು.
• ಮುಂದಿನ ನಾಲ್ಕೈದು ದಿನಗಳ ಒಳಗೆ ಮೈಸೂರು ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಬೇಕು. ಹಗಲು ರಾತ್ರಿ ಶ್ರಮ ಹಾಕಿ ಗುಂಡಿಗಳನ್ನು ಮುಚ್ಚಿ ಎಂದು ಸೂಚಿಸಿದರು.
• ೨೧೨ ಮಂದಿ ಯುಜಿಡಿ ಪೌರ ಕಾರ್ಮಿಕರ ಸಮಾನ ಕೆಲಸ-ಸಮಾನ ವೇತನ ಜಾರಿಗೊಳಿಸುವಂತೆ ಮೂರು ವರ್ಷಗಳಿಂದ ಬೇಡಿಕೆ ಇದೆ. ಇತರೆ ಪೌರ ಕಾರ್ಮಿಕರಿಗೆ ನೀಡಿರುವ ಸವಲತ್ತುಗಳನ್ನೇ ತಮಗೂ ನೀಡಬೇಕು ಎನ್ನುವ ಬೇಡಿಕೆ ಅವರದ್ದಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇವರ ಸಮಸ್ಯೆ ಬಗೆಹರಿಸಿ, ಬೇಡಿಕೆ ಈಡೇರಿಸುವ ದಿಕ್ಕಿನಲ್ಲಿ ಕ್ರಮ ವಹಿಸೋಣ ಎಂದು ಸಿಎಂ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
• ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನೂರಾರು ಕೋಟಿ ಅನುದಾನ ಬಂದಿದೆ. ಕೆಲಸಗಳು ಯಾವ ಹಂತದಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.