
ಮಂಗಳೂರು: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಗಮಕಿ ಸತೀಶ ಕುಮಾರ್ ನಿಟ್ಟೆ ಕೆಮ್ಮಣ್ಣು ಅವರ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಪ್ರಸಿದ್ಧ ವ್ಯಾಖ್ಯಾನಕಾರ ಸರ್ಪಂಗಳ ಈಶ್ವರ ಭಟ್ ಮಂಗಳೂರು, ಗಮಕಿ ಶ್ರೀಮತಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಗಮಕಿ ಯಜೇಶ್ ಆಚಾರ್ಯ ಸುರತ್ಕಲ್ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಕಾರ್ಕಳ ಅವರ ದತ್ತಿನಿಧಿಯ ‘ಕಾಷ್ಠಶಿಲ್ಪಕಲಾ ಪ್ರಶಸ್ತಿ’ಗೆ ರಥ ಶಿಲ್ಪಿ ಶಂಕರ ಆಚಾರ್ಯ ಕೋಟೇಶ್ವರ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗಳು ತಲಾ ಹತ್ತು ಸಾವಿರ ನಗದು, ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿವೆ ಎಂದು ಸಂಘದ ಅಧ್ಯಕ್ಷ ನಾ.ಮೊಗಸಾಲೆ ತಿಳಿಸಿದ್ದಾರೆ.
ಮಾರ್ಚ್ 23 ರಂದು ಕಾಂತಾವರದ ಕನ್ನಡ ಭವನದಲ್ಲಿ ನಡೆಯುವ ಮುದ್ದಣ ಸಾಹಿತ್ಯೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.