ಬೆಳಗಾವಿ : ಹುಕ್ಕೇರಿ ತಾಲೂಕು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ 250 ವರ್ಷಗಳಿಗೂ ಹಳೆಯ ಅಲ್ಲಮಪ್ರಭುಸ್ವಾಮಿ ಮತ್ತು ವಿಠಲ ದೇವಸ್ಥಾನವನ್ನು ಪಾರಂಪರಿಕ ಸ್ಮಾರಕ ಎಂದು ಘೋಷಣೆ ಮಾಡಬೇಕು ಮತ್ತು ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಕೊಲ್ಲಾಪುರ ಜಿಲ್ಲೆಯ ವಿದ್ಯಾರ್ಥಿ ನಿಖಿಲ್ ವಿಠಲ ಪಾಟೀಲ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರಿಂದ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ.

  • ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರ ನಿಖಿಲ್ ಹಾಜರಿದ್ದು ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿರುವ ಅಲ್ಲಮಪ್ರಭುಸ್ವಾಮಿ ಮತ್ತು ವಿಠಲ ದೇವಸ್ಥಾನ ಸೇರಿದಂತೆ ರಾಜ್ಯದಲ್ಲಿ ಶಿಥಿಲಗೊಂಡಿರುವ ಮತ್ತು ನದಿಗಳ ಹಾಗೂ ಅಣೆಕಟ್ಟೆಗಳ ನೀರಿನಲ್ಲಿ ಮುಳುಗಡೆಯಾಗುವ ಪುರಾತನ ದೇವಸ್ಥಾನಗಳನ್ನು ಸಂರಕ್ಷಣೆ ಮಾಡಬೇಕು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಪರಂಪರೆ ಹಾಗೂ ಮಾಹಿತಿಗಾಗಿ ಪರಂಪರೆಯ ಸ್ಮಾರಕಗಳನ್ನು ಸಂರಕ್ಷಿಸಬೇಕು. ಕನ್ನಡಿಗರ ಸಾಂಸ್ಕೃತಿಕ ಪರಂಪರೆ ಕಾಪಾಡಬೇಕು. ಈ ಮೂಲಕ ನೂರಾರು ವರ್ಷಗಳ ಕಾಲ ಅದನ್ನು ಉಳಿಸುವಂತೆ ಮಾಡಬೇಕು ಎಂದು ಕೋರಿದ್ದರು. ಈ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಬೆಳಗಾವಿ ಜಿಲ್ಲಾಧಿಕಾರಿಗಳು, ಹಿಡಕಲ್ ಅಣೆಕಟ್ಟು ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಈ ದೇವಾಲಯಗಳ ರಕ್ಷಣೆಗೆ ವಿಶೇಷ ಸಮಿತಿ ರಚನೆ ಮಾಡಬೇಕು. ಸಮಿತಿಗೆ ಪುರಾತತ್ವ ಇಲಾಖೆಯಲ್ಲಿ ಪರಿಣತರನ್ನು ನೇಮಕ ಮಾಡಬೇಕು. ಈ ಸಮಿತಿ ದೇವಾಲಯಗಳ ಕಾಲಮಾನ, ಸಂಸ್ಕೃತಿಯನ್ನು ನಿಖರವಾಗಿ ಅಧ್ಯಯನ ಮಾಡಬೇಕು. ಅದಕ್ಕೆ ಆಗಬಹುದಾದ ಹಾನಿಯನ್ನು ತಡೆಯಬೇಕು ಎಂದು ನ್ಯಾಯ ಪೀಠಕ್ಕೆ ಕೋರಿದರು. ಅಲ್ಲಮಪ್ರಭು ಸ್ವಾಮಿ ದೇವಾಲಯ ಕುರಿತು ಸರ್ವೆ ನಡೆಸಿರುವ ಕುರಿತ ವರದಿಯನ್ನು ಒದಗಿಸದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಸಮಿತಿ ರಚಿಸಬೇಕು. ಕರ್ನಾಟಕದಲ್ಲಿ ನೀರಿನಲ್ಲಿ ಮುಳುಗಡೆಯಾಗಿರುವ ಪಾರಂಪರಿಕ ದೇವಾಲಯಗಳ ಕುರಿತು ಸಮೀಕ್ಷೆ ನಡೆಸಲು ಜಂಟಿ ಸಮಿತಿ ರಚಿಸಬೇಕು ಎಂದು ಅರ್ಜಿದಾರರು ನ್ಯಾಯ ಪೀಠಕ್ಕೆ ಮನವಿ ಮಾಡಿದರು.