ಕುಂದಾಪುರ: ಕರಾವಳಿಯ ಅತ್ಯಂತ ಕಾರಣಿಕ ಹಾಗೂ ಪುರಾಣ ಪ್ರಸಿದ್ಧವಾಗಿರುವ ಮಾರಣಕಟ್ಟೆ ಜಾತ್ರೆಗೆ ಭಕ್ತ ಜನರು ಅತಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಕರಾವಳಿ, ಮಲೆನಾಡು ಭಾಗದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ, ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎಂಬ ಖ್ಯಾತಿಯ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಮಕರ ಸಂಕ್ರಮಣ ಉತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೇಶ– ವಿದೇಶದಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದುಕೊಂಡರು.
ಮಕರ ಸಂಕ್ರಮಣದಂದು ನಡೆಯುವ ದೇವಳದ ಉತ್ಸವಕ್ಕೆ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕ ಮಗಳೂರು ಸೇರಿದಂತೆ ವಿವಿಧ ಜಿಲ್ಲೆಯಿಂದ ಬರುವ ಸಾವಿರಾರು ಭಕ್ತರು, ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಮಂಗಳಾರತಿ, ಹೂ ಹಣ್ಣು ಕಾಯಿ ನೆರವೇರಿಸಿ, ಹರಕೆ ಸಲ್ಲಿಸಿ ತೆರಳುವುದು ವಾಡಿಕೆ. ತಿಂಗಳುಗಳ ಕಾಲ ನಡೆಯುವ ಮಾರಣಕಟ್ಟೆ ಹಬ್ಬ ಎಂಬ ಪ್ರತೀತಿ ಹೊಂದಿರುವ ಜಾತ್ರೆಯ ಮೊದಲ ಮೂರು ದಿನ ಕಾಲಿಡಲು ಜಾಗವಿರದಂತೆ ಭಕ್ತರು ಸೇರುತ್ತಾರೆ. ಮುಂಬೈ, ಬೆಂಗಳೂರು, ಗೋವಾ, ಹುಬ್ಬಳ್ಳಿ, ಬೆಳಗಾವಿ, ಪುಣೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ, ವಿದೇಶದಲ್ಲಿ ನೆಲೆಸಿರುವ ಕ್ಷೇತ್ರದ ಭಕ್ತರು ಊರಿಗೆ ಮರಳಿ ಉತ್ಸವದಲ್ಲಿ ಭಾಗವಹಿಸುವುದನ್ನು ರೂಢಿಸಿಕೊಂಡಿದ್ದಾರೆ.
ಅರ್ಚಕ ಶಂಕರ ಭಟ್ಟರ ನೇತೃತ್ವದಲ್ಲಿ ಮಂಗಳಾರತಿ, ಇತರ ಧಾರ್ಮಿಕ ವಿಧಿಗಳು ನೆರವೇರಿದವು. 11 ಗಂಟೆಯ ಬಳಿಕ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಶಾಸಕ ಗುರುರಾಜ್ ಗಂಟಿಹೊಳೆ, ಮುಖಂಡರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ದೇವಸ್ಥಾನದ ಆಡಳಿತ ಧರ್ಮದರ್ಶಿ ಸದಾಶಿವ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ರಘುರಾಮ್ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ನಾರಾಯಣ ಶೆಟ್ಟಿ, ಹೈದರಾಬಾದ್‌ನ ಉದ್ಯಮಿ ಕೃಷ್ಣಮೂರ್ತಿ ಮಂಜರು, ಮುಂಬೈ ಉದ್ಯಮಿ ಸತೀಶ ಕೊಠಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್‌ಕುಮಾರ್ ಶೆಟ್ಟಿ, ದೇಗುಲದ ಪಾತ್ರಿಗಳಾದ ಶ್ರೀಧರ ಮಾರ್ಡಿ, ಗಣಪಯ್ಯ ಶೆಟ್ಟಿ, ಹಿಂದಿನ ಧರ್ಮದರ್ಶಿ ಎನ್. ಶಿವರಾಮ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರನ್ನು ಸುಧಾರಿಸುವುದು ಸವಾಲಿನ ಕೆಲಸ. ಪೊಲೀಸ್ ಇಲಾಖೆಯೊಂದಿಗೆ ದೇವಳದ ಸಿಬ್ಬಂದಿ, ಭಕ್ತರು ಅಂತಸ್ತು, ಸ್ಥಾನಮಾನ ಮರೆತು ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುತ್ತಾರೆ. ಸರತಿಯಲ್ಲಿ ನಿಲ್ಲಿಸುವುದು, ಅನ್ನಸಂತರ್ಪಣೆ, ಪ್ರಸಾದ ವಿತರಣೆಯಲ್ಲಿ ಸಹಕರಿಸುವುದು, ಭಕ್ತರ ಬೇಡಿಕೆಗಳನ್ನು ಪೂರೈಸುವ ಕಾರ್ಯ ನಿರ್ವಹಿಸುತ್ತಾರೆ.
ಜಾತ್ರೆಯ ಮೊದಲ ದಿನ (ಮಂಗಳವಾರ) ರಾತ್ರಿ ನಡೆಯುವ ಕೆಂಡ ಸೇವೆಯಲ್ಲಿ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ, ಪಡುಬಿದ್ರಿ, ಮುಲ್ಕಿ ಭಾಗಗಳಿಂದ ಬಂದಿದ್ದ ಭಕ್ತರು ಕೆಂಡದ ರಾಶಿ ತುಳಿಯುವ ಹರಕೆ ತೀರಿಸಿದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕೆಂಡಸೇವೆಯಲ್ಲಿ ಭಾಗಿಯಾಗುವುದು ಇಲ್ಲಿನ ವಿಶೇಷ. ಜ.15ರಂದು (ಬುಧವಾರ) ಮತ್ತು 16ರಂದು (ಗುರುವಾರ) ಮಂಡಲ ಸೇವೆ, ಯಕ್ಷಗಾನ ಸೇವೆ ನಡೆಯಲಿದೆ. ಮೂರು ದಿನವೂ ಭಕ್ತರಿಗೆ ಪ್ರಸಾದ ರೂಪವಾಗಿ ವಿಶೇಷ ಅನ್ನಸಂತರ್ಪಣೆ ನಡೆಯಲಿದೆ. ಮುಂಬೈಯಲ್ಲಿ ಕ್ಯಾಟರಿಂಗ್ ಉದ್ಯಮಿಯಾಗಿರುವ ನಾಯ್ಕನಕಟ್ಟೆಯ ಸತೀಶ ಕೊಠಾರಿ ಹಲವು ವರ್ಷಗಳಿಂದ ಅನ್ನಸಂತರ್ಪಣೆ ಸೇವೆ ನೀಡುತ್ತಿದ್ದಾರೆ.
ವಾರ್ಷಿಕ ಜಾತ್ರೆಯ ಅಂಗವಾಗಿ ಹೂವುಗಳಿಂದ ಅಲಂಕೃತಗೊಂಡಿರುವ ಬ್ರಹ್ಮಲಿಂಗೇಶ್ವರ
ವಾರ್ಷಿಕ ಜಾತ್ರೆಯ ಅಂಗವಾಗಿ ತುಳಸಿ ಕಟ್ಟೆ ಪೂಜೆ ನಡೆಯಿತು.ಮಾರಣಕಟ್ಟೆ ಜಾತ್ರೆಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಹಳದಿ ಬಣ್ಣದ ಸೇವಂತಿಗೆ ಕಾಣುತ್ತದೆ. ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಸೇವಂತಿಗೆಯನ್ನು ಆತನ ಮುಡಿಗೇರಿಸುವುದು ವಾಡಿಕೆ. ಭಕ್ತರು ತಲೆ ಮೇಲೆ ಹಣ್ಣು– ಕಾಯಿ ಸೇವಂತಿಗೆ ಹೂವಿನ ಬುಟ್ಟಿ ಹೊತ್ತು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವರಿಗೆ ಅರ್ಪಿಸಿ ಮಂಗಳಾರತಿ ಪಡೆದು ಅರ್ಚಕರಿಂದ ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಾರೆ. ಹೆಮ್ಮಾಡಿ ಆಸುಪಾಸಿನಲ್ಲಿ ಬೆಳೆಯುವ ಸೇವಂತಿಗೆಗೆ ಬಹು ಬೇಡಿಕೆ. ಹೂವುಗಳನ್ನು ಬ್ರಹ್ಮಲಿಂಗೇಶ್ವರನಿಗೆ ಮೊದಲ ಅರ್ಪಿಸಬೇಕು ಎನ್ನುವ ವಾಡಿಕೆ ಇರುವುದರಿಂದ ಸೇವಂತಿಗೆ ಬೆಳೆದ ಬೆಳೆಗಾರರು ದೇವರಿಗೆ ಸೇವಂತಿಗೆ ಮಾಲೆ ಅರ್ಪಿಸುತ್ತಾರೆ.