ಶಬರಿಮಲೆ: ಇಲ್ಲಿನ ಪ್ರಸಿದ್ದ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಅಂಗವಾಗಿ ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಿ, ಮಕರಜ್ಯೋತಿಯನ್ನು ಕಣ್ಣುಂಬಿಕೊಂಡರು.

ಸಂಜೆ ದೀಪಾರಾಧನೆ ಬಳಿಕ ಪೊನ್ನಂಬಲ ಮೇಡು ಬೆಟ್ಟದ ಪೂರ್ವ ತುದಿಯಲ್ಲಿ ‘ಮಕರವಿಳಕ್ಕು’ ಜ್ಯೋತಿ ಕಾಣಿಸಿಕೊಂಡಿತು. ಲಕ್ಷಾಂತರ ಭಕ್ತರು ಒಕ್ಕೊರಲಿನಿಂದ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಭಕ್ತಿಯಿಂದ ಜಪಿಸಿದರು.

ಮಕರಜ್ಯೋತಿ ದರ್ಶನಕ್ಕಾಗಿ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕಳೆದ ಕೆಲ ದಿನಗಳಿಂದ ದೇಗುಲದಲ್ಲಿಯೇ ಉಳಿದುಕೊಂಡಿದ್ದರು.

ದೀಪಾರಾಧನೆಗೆ ಮೊದಲು ಸಂಜೆ 6 ಗಂಟೆಯ ಹೊತ್ತಿಗೆ ಪಾಂಡಲಂ ಅರಮನೆಯಿಂದ ತಿರುವಾಭರಣ ಮೆರವಣಿಗೆ ಸನ್ನಿಧಾನಕ್ಕೆ ತಲುಪಿತು. ಪ್ರತಿ ವರ್ಷ ದೇಗುಲಕ್ಕೆ ಸುಮಾರು 5 ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಎಂದು ತಿರುವನಾಂಕೂರು ದೇವಸ್ಥಾನ ಮಂಡಳಿ ತಿಳಿಸಿದೆ. ಜನವರಿ 20ರವರೆಗೆ ಅಯ್ಯಪ್ಪ ದೇಗುಲವನ್ನು ತೆರೆದಿರುತ್ತದೆ.