ಧರ್ಮಸ್ಥಳ : ಪ್ರತಿ ವರ್ಷದಂತೆ ಈ ವರ್ಷವೂ ಹೊಸ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುವ ಸುಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬೆಂಗಳೂರು ಟಿವಿಎಸ್ ಕಂಪನಿ ಉದ್ಯಮಿ ಗೋಪಾಲ್ ರಾವ್ ಮತ್ತು ಆನಂದಮೂರ್ತಿ ಅವರ ತಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಅನ್ನಛತ್ರ ಸಹಿತ ದೇಗುಲದ ಮುಂಭಾಗ, ಒಳಾಂಗಣ, ಹೊರಾಂಗಣ, ಗೋಪುರ, ಮುಖಮಂಟಪವನ್ನು ಸಂಪೂರ್ಣವಾಗಿ ಸಿಂಗರಿಸಿದ್ದಾರೆ. ಡಿಸೆಂಬರ್ 25 ರಿಂದ ಸುಮಾರು 80 ಜನರ ತಂಡ ಸತತವಾಗಿ ದೇಗುಲದ ಅಲಂಕಾರದಲ್ಲಿ ತೊಡಗಿದೆ. ಈ ಸಲ ಮುಂಭಾಗವನ್ನು ಆದಿಯೋಗಿ ಪ್ರತಿಮೆಯೊಂದಿಗೆ ಸುಂದರವಾಗಿ ಅಲಂಕರಿಸಲಾಗಿದೆ. ಸುಮಾರು 16 ವರ್ಷಗಳಿಂದ ಈ ತಂಡ ಧರ್ಮಸ್ಥಳ ದೇಗುಲವನ್ನು ಅಲಂಕರಿಸುತ್ತಾ ಬಂದಿದೆ. ಈ ವರ್ಷ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ದೇಶಿ-ವಿದೇಶಿ ಹೂಗಳು, ಆಡಿಕೆ, ಭತ್ತದ ತೆನೆ, ಹೊಂಬಾಳೆ, ದಾಳಿಂಬೆ, ತೆಂಗಿನಕಾಯಿ, ಬಾಳೆಹಣ್ಣು, ಮೂಸಂಬಿ, ಕಬ್ಬು ಸೇರಿದಂತೆ ಒಂದು ಟನ್ ಹಣ್ಣು ಬಳಸಿ ದೇಗುಲವನ್ನು ಹೊಸ ವರ್ಷಕ್ಕೆ ಸಂಭ್ರಮದಿಂದ ಶೃಂಗಾರ ಮಾಡಲಾಗಿದೆ.