ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಮೇಳದ ಯಕ್ಷಗಾನ ತಿರುಗಾಟವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ನ.3 ರಂದು ಶ್ರೀ ಕ್ಷೇತ್ರದಲ್ಲಿ ಸೇವೆಯಾಟ ಪ್ರದರ್ಶನ ನಡೆಸುವ ಮೂಲಕ ಪ್ರಾರಂಭಗೊಳ್ಳಲಿದೆ. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 12ರ ವರೆಗೆ ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ನ.20ರ ವರೆಗೆ ಪ್ರತಿ ರಾತ್ರಿ ಸೇವಾರ್ಥಿಗಳ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶನ ನಡೆದು 21ರಂದು ಮೇಳದ ಮಹಾ ಗಣಪತಿಯ ದಿಗ್ವಿಜಯ ತಿರುಗಾಟ ದೊಂದಿಗೆ ಮುಂದಿನ ಕ್ಯಾಂಪಿಗೆ ತೆರಳಲಿದೆ ಎಂದು ಮೇಳದ ವ್ಯವಸ್ಥಾಪಕರ ಪ್ರಕಟನೆ ತಿಳಿಸಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ
ಕರ್ನಾಟಕದ ಸರ್ವಾಂಗ ಸುಂದರ ಗಂಡುಕಲೆ ಯಕ್ಷಗಾನ. ಭಾವಪೂರ್ಣ ನಾಟ್ಯಾಭಿನಯದ ಜೊತೆಗೆ ಆಶು ಸಾಹಿತ್ಯದ ಮೂಲಕ ಎಲ್ಲಾ ವರ್ಗದ ಜನರ ಮನವನ್ನು ತಲುಪುವಲ್ಲಿ ಈ ಕಲೆಯ ಶಕ್ತಿ ವಿಶೇಷ. ಪುರಾಣ ಕಥೆಗಳ ಸಂಯೋಜನೆಗಳಲ್ಲದೆ, ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲ್ಪಟ್ಟು ವಿದೇಶಗಳಲ್ಲಿಯೂ ತನ್ನ ಕಂಪನ್ನು ಸೂಸಿ ಅನೇಕ ಕಲಾರಸಿಕರನ್ನು ಹೊಂದಿದ ಏಕೈಕ ಕಲೆ ಅದು ಯಕ್ಷಗಾನ.
ಶ್ರೀ ಕ್ಷೇತ್ರ ಧರ್ಮಸ್ಥಳ ಕಲಾ ಪ್ರಾಕಾರಗಳ ಆಶ್ರಯ ತಾಣ. ನಟರಾಜನೆನಿಸಿದ ಶ್ರೀ ಮಂಜುನಾಥನ ಸಾನ್ನಿಧ್ಯ, ಹಾಗೂ ಕಲೆಯ ಮೇಲಿನ ವಿಶೇಷ ಪ್ರೀತಿಯುಳ್ಳ ಹೆಗ್ಗಡೆ ಮನೆತನದ ಕೃಪಾಶೀರ್ವಾದದೊಂದಿಗೆ ನಡೆಸಲ್ಪಡುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಸುಮಾರು ಎರಡು ಶತಕಗಳ ಹಿನ್ನೆಲೆ ಇರುವ ಕುರಿತು ದಾಖಲೆಯಿದೆ.
ಆರಂಭದಲ್ಲಿ ಕ್ಷೇತ್ರದಲ್ಲಿ ಮನೋರಂಜನೆಯ ಉದ್ದೇಶದಿಂದ ಹುಟ್ಟಿಕೊಂಡ ಯಕ್ಷಗಾನ ಮೇಳವು, ಕ್ರಮೇಣ ಸಂಚಾರಿ ಬಯಲಾಟ ಮೇಳವಾಗಿ ಅನೇಕ ಗಣ್ಯರಿಂದ ನಡೆಸಲ್ಪಟ್ಟು, ಬೇಡಿಕೆಯ ಮೇರೆಗೆ ಶ್ರೀ ಕ್ಷೇತ್ರದ ವತಿಯಿಂದ ಸುಮಾರು 1965ರಿಂದ 1995ರ ತನಕ ವಾಣಿಜ್ಯಪರ ಟೆಂಟ್ ಮೇಳವಾಗಿ ನಿರ್ವಹಿಸಲ್ಪಟ್ಟಿರುತ್ತದೆ. ಹರಿಕೆ ಸೇವಾದಾರರ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು 1998 ರಿಂದ ಯಕ್ಷಗಾನ ಮೇಳವನ್ನು ಪೂರ್ಣ ಪ್ರಮಾಣದ ಬಯಲಾಟ ಮೇಳವಾಗಿ ಪರಿವರ್ತಿಸಿದರು. ಪ್ರಸ್ತುತ ಹತ್ತು ವರ್ಷಗಳಿಗಾಗುವಷ್ಟು ಹರಿಕೆ ಸೇವೆಗಳ ದಾಖಲಾತಿಯಿದೆ.
ಕಾಲಕ್ರಮ ಹಾಗೂ ಪರಿಸ್ಥಿತಿ, ಪದ್ಧತಿಗಳಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ 2015 ರಿಂದ ಯಕ್ಷಗಾನ ಮೇಳದಲ್ಲಿ ಕಾಲಮಿತಿ ಪ್ರದರ್ಶನ ಅಳವಡಿಸಲಾಯ್ತು. ಸಂಜೆ 7 ರಿಂದ 12 ಗಂಟೆವರೆಗಿನ ಪ್ರದರ್ಶನಕ್ಕೆ ಕಲಾಭಿಮಾನಿಗಳು, ಸೇವಾದಾರರೂ ಉತ್ತಮವಾಗಿ ಸ್ಪಂದಿಸಿದರು. ಆ ಬಳಿಕ ಹೆಚ್ಚಿನ ಬಯಲಾಟ ಮೇಳಗಳು ಇದೇ ಕಾಲಮಿತಿಯನ್ನು ಒಪ್ಪಿ ನಮ್ಮ ನಡೆಯನ್ನು ಮುಂದುವರೆಸಿರುತ್ತದೆ.
ಶ್ರೀ ಧರ್ಮಸ್ಥಳ ಮೇಳವು ಒಂದು ಸಂಚಾರಿ ದೇವಾಲಯ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಹೊರಡುವ ಮೇಳದಲ್ಲಿ ನಿರ್ವಿಘ್ನದಾಯಕನಾದ ಶ್ರೀ ಮಹಾಗಣಪತಿ ದೇವರ ಸಾನ್ನಿಧ್ಯವಿದೆ.ಮೇಳದ ರಕ್ಷಣೆಗಾಗಿ ಶ್ರೀ ಠಜೋಡಿತ್ತಾಯ ದೈವಗಳು (ಕಲ್ಕುಡ ಕಲ್ಲುರ್ಟಿ) ಜೊತೆಯಾಗುತ್ತದೆ. ದಿನಂಪ್ರತಿ ಶ್ರೀ ಮಹಾಗಣಪತಿ ದೇವರಿಗೆ ಸೇವಾದಾರರ ಕಡೆಯಿಂದ 6 ಕಾಯಿ ಗಣಹೋಮ, ಮಹಾಪೂಜೆ, ಉತ್ಸವ, ಅನ್ನಸಂತರ್ಪಣೆ ಬಳಿಕ ಸಂಜೆ ಯಕ್ಷಗಾನ ಸೇವೆ ನಡೆಯುತ್ತದೆ .
ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಪ್ರತೀವರ್ಷ ಮಳೆಗಾಲದಲ್ಲಿ ಯಕ್ಷಗಾನ ಮೇಳಕ್ಕೆ ಅಗತ್ಯವಿರುವ ವೇಷಭೂಷಣಗಳನ್ನು ನುರಿತ ನೌಕರರಿಂದ ತಯಾರಿಸಲಾಗುತ್ತದೆ. ತಿರುಗಾಟದಲ್ಲಿ ಪ್ರದರ್ಶಿಸಲ್ಪಡಬಹುದಾದ ಪ್ರಸಂಗಗಳ ಸಂಯೋಜನೆ- ತಯಾರಿ ಕೆಲಸಗಳು ನಡೆಯುತ್ತವೆ. ಮುಂದಿನ ತಿರುಗಾಟದ ಕುರಿತಾದ ಮಾರ್ಗಸೂಚಿ (ಕ್ಯಾಂಪು ವಿವರ) ತಯಾರಿಸಲಾಗುತ್ತದೆ.
ಶ್ರೀ ಸ್ವಾಮಿಯು ಅನುಗ್ರಹ ಹಾಗೂ ಪೂಜ್ಯ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು 2024-25ರ ಸಾಲಿನ ತಿರುಗಾಟವನ್ನು ಇದೇ ಬರುವ ನವೆಂಬರ್ 3 ರಿಂದ 20ರ ತನಕ ಶ್ರೀ ಕ್ಷೇತ್ರದಲ್ಲಿ ಸೇವೆ ಆಟಗಳನ್ನು ಹಮ್ಮಿಕೊಂಡಿರುತ್ತದೆ.
ನವೆಂಬರ್ 19 ರಂದು ಗುರುವಾರ ಯಕ್ಷಗಾನ ಮೇಳಕ್ಕೆ ಸಂಬಂಧಿಸಿದ ಶ್ರೀ ಜೋಡಿತ್ತಾಯ ದೈವಗಳ ನೇಮೋತ್ಸವ ನಡೆಯಲಿದೆ. ನವೆಂಬರ್ 21ರಿಂದ ಮೇ 23ರ ತನಕ ತಿರುಗಾಟ ನಡೆಸಲಿದೆ.ಶ್ರೀ ಸ್ವಾಮಿಯಲ್ಲಿ ಪ್ರಾರ್ಥಿಸಿ ನಿಗದಿಪಡಿಸಿರುವಂತೆ ನವೆಂಬರ್ 21ರ(ಕಾರ್ತಿಕ ಮಾಸ)
ಶುಭದಿನದಲ್ಲಿ ತಿರುಗಾಟ ಆರಂಭಿಸಲಿರುವ ಮೇಳವು 180 ದಿನಗಳ ಕಾಲ ಸಂಚಾರ ನಡೆಸಲಿದೆ. 65 ಜನರ ತಂಡವು ಪ್ರತೀದಿನ ಬೇರೆ ಬೇರೆ ಊರುಗಳೀಗೆ ತೆರಳಿ ಅಲ್ಲಿ ಸೇವಾದಾರರ ಅಪೇಕ್ಷೆಯಂತೆ ಸೇವೆ ಆಟವನ್ನು ಪ್ರದರ್ಶಿಸಲಿದೆ. ಅನೇಕ ಭಕ್ತರು ಶ್ರೀ ಸ್ವಾಮಿಗೆ ಸೇವೆ ಸಲ್ಲಿಸಿ, ಸೇವೆಯನ್ನು ವೀಕ್ಷಿಸಿ ಕೃತಾರ್ಥರಾಗಲಿದ್ದಾರೆ.