ಧರ್ಮಸ್ಥಳ :
ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹರಕೆ ಬಯಲಾಟ ಪ್ರದರ್ಶನದ ತಿರುಗಾಟ ಆರಂಭಗೊಂಡಿದೆ.

ಇನ್ನು ಮುಂದಿನ 23 ಮೇ 2024ರವರೆಗೆ ಮೇಳದ ಕಲಾವಿದರು ಮೇಳದ ಗಣಪನೊಂದಿಗೆ ಸೇವಾರ್ಥಿಗಳ ಮನೆಗೆ ತೆರಳಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂದೇಶವನ್ನು ನೀಡುವ ಪೌರಾಣಿಕ ಪ್ರಸಂಗಗಳನ್ನು ಆಡಿ ತೋರಿಸುತ್ತಾರೆ.

 

ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದ ಹಾಗೂ ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಶುಭಹಾರೈಕೆಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಈ ಸಾಲಿನ ತಿರುಗಾಟ ಶನಿವಾರ ಆರಂಭಗೊಂಡಿತು.

ಶನಿವಾರ ಬೆಳಗ್ಗೆ 8.30ಕ್ಕೆ ಮೇಳದ ಶ್ರೀ ಮಹಾಗಣಪತಿ ದೇವರು ಶ್ರೀ ಕ್ಷೇತ್ರದ ಗಣಪತಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ಮೆರವಣಿಗೆಯೊಂದಿಗೆ ಬಂದು ಮಂಜುಕೃಪಾ (ಅಡಿಗರ ಮನೆ)ದಲ್ಲಿ ವಿರಾಜಮಾನರಾಗಿ ಮಧ್ಯಾಹ್ನ ಗಣಹೋಮ, ಮಹಾಪೂಜೆ ನಡೆಯಿತು. ಸಂಜೆ ಪೂಜೆಯ ಬಳಿಕ ಸಂಚಾರ ಆರಂಭವಾಗಲಿದೆ.