ಹುಬ್ಬಳ್ಳಿ:
ಧಾರವಾಡ-ಕಿತ್ತೂರು, ಬೆಳಗಾವಿ ರೈಲು ಮಾರ್ಗದ ಕ್ಯಾರಕೊಪ್ಪ-ಮಮ್ಮಿಗಟ್ಟಿ ರೈಲು ಮಾರ್ಗ ಅಭಿವೃದ್ಧಿಪಡಿಸಲು ಮಂಜೂರಾದ ಟೆಂಡರ್ ಅನ್ನು ಕೇಂದ್ರ ಸರ್ಕಾರ ಯಾವುದೇ ಕಾರಣ ನೀಡದೆ ಏಕಾಏಕಿ ರದ್ದುಪಡಿಸಿದ್ದು ಇದು ಈ ಭಾಗಕ್ಕೆ ಭಾರೀ ಹಿನ್ನಡೆಯಾಗಿದೆ. ಆದರೆ ಈ ಭಾಗದ ಬಿಜೆಪಿ ನಾಯಕರು ಹಾಗೂ ಸಂಸದರು ನಿಷ್ಕ್ರಿಯರಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಮಾರು 73 ಕಿ.ಮೀ. ಉದ್ದದ 927 ಕೋಟಿ ರೂ. ವೆಚ್ಚದ ಧಾರವಾಡ, ಕಿತ್ತೂರ, ಬೆಳಗಾವಿ ಮದ್ಯದ ರೈಲು ಮಾರ್ಗದ ಅಭಿವೃದ್ಧಿಗೆ ಕಳೆದ ಅನೇಕ ವರ್ಷಗಳಿಂದ ಉತ್ತರ ಕರ್ನಾಟಕದ ಜನ ಹೋರಾಟ ನಡೆಸಿದ್ದರು. ಇದರ ಪರಿಣಾಮವಾಗಿ ಆಗಸ್ಟ್ 2019ರಲ್ಲಿ ಯೋಜನೆಗೆ ಮಂಜೂರಾತಿ ನೀಡಿ ಸಮೀಕ್ಷೆ ಕಾರ್ಯ ಆರಂಭವಾಗಿತ್ತು. ಈ ಯೋಜನೆಯ ಭಾಗವಾಗಿದ್ದ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಾರ್ಗದ 12 ಕಿ.ಮೀ. ಉದ್ದದ ರೈಲು ಮಾರ್ಗಕ್ಕಾಗಿ 243.66 ಕೋಟಿ ರೂ. ವೆಚ್ಚದ ಟೆಂಡರ್ ಅನ್ನು ಯಾವುದೇ ಕಾರಣವಿಲ್ಲದೆ ಕೇಂದ್ರ ಸರ್ಕಾರ ರದ್ದುಪಡಿಸಿರುವುದು ಈ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕದ ಜನ ಆಕ್ರೋಶಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
927 ಕೋಟಿ ರೂ. ವೆಚ್ಚದ ಧಾರವಾಡ, ಕಿತ್ತೂರ, ಬೆಳಗಾವಿ ಯೋಜನೆಗೆ ಸೆಪ್ಟೆಂಬರ್ 2020ರಲ್ಲಿ ಮಂಜೂರಿ ನೀಡಲಾಗಿತ್ತು. ಕೇಂದ್ರದ ಈ ಯೋಜನೆ ತ್ವರಿತ ಅಭಿವೃದ್ಧಿಗಾಗಿ ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ (ಕೆ-ರೆಡ್) ಮುಖಾಂತರ ಸುಮಾರು 463 ಕೋಟಿ ರೂ. ಮಂಜೂರು ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆಯ ಭಾಗದ ಟೆಂಡರ್ ಅನ್ನು ರದ್ದು ಪಡಿಸಿದ್ದು ಖಂಡನೀಯ ಮತ್ತು ಉತ್ತರ ಕರ್ನಾಟಕ ವಿರೋಧಿ ಕ್ರಮವಾಗಿದೆ ಎಂದು ವಸಂತ ಲದವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅದರಲ್ಲಿಯೂ ಉತ್ತರ ಕರ್ನಾಟಕದ ಸಂಸದರು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ಈ ಯೋಜನೆಯ ಪುನರಾರಂಭಕ್ಕೆ ಮತ್ತು ತ್ವರಿತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ವಸಂತ ಲದವಾ ಒತ್ತಾಯಿಸಿದ್ದಾರೆ.