ಬೆಳಗಾವಿ ಸುವರ್ಣವಿಧಾನಸೌಧ : ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಉಂಟಾದ ಅವ್ಯವಹಾರದ ಬಗ್ಗೆ ಶಾಸಕ ಟಿ.ರಘುಮೂರ್ತಿ ಅವರು ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಕೃಷಿ ಸಚಿವರನ್ನು ಪ್ರಶ್ನಿಸಿದ್ದಾರೆ.
ಬುಧವಾರ ಶಾಸಕರ 175ನೇ ಚುಕ್ಕೇ ಗುರುತಲ್ಲದ ಪ್ರಶ್ನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲಿಖಿತವಾಗಿ ಉತ್ತರ ನೀಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಪಿ.ಮಹಾದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿತ ಖಾತೆದಾರರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ರೈತರು ದೂರು ನೀಡಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನಲ್ಲಿ 68717 ಹೆಕ್ಟೇರ್ ಪ್ರದೇಶದ 14 ವಿವಿಧ ಅಧಿಸೂಚಿತ ಬೆಳೆಗೆ ಒಟ್ಟು 44852 ಬೆಳೆವಿಮೆ ನೊಂದಣಿ ಪ್ರಸ್ತಾವನೆಗಳು ನೋಂದಣಿಯಾಗಿವೆ. ಇದಲ್ಲದೆ ತಾಲ್ಲೂಕಿನ ಬೀಳು ಭೂಮಿ ಹಾಗೂ ನೋಂದಾಯಿತ ಬೆಳೆಯಲ್ಲದ ಬೇರೆ ಬೆಳೆಗಳಿಗೆ 80 ಪ್ರಕರಣಗಳಲ್ಲಿ ರೂ.67 ಲಕ್ಷಕ್ಕೂ ಹೆಚ್ಚು ಬೆಳೆವಿಮೆ ಹಣ ದುರುಪಯೋಗವಾಗಿದೆ. ಮೂಲ ಖಾತೆದಾರರ ಬದಲಿಗೆ ಬೇರೆಯೊಬ್ಬರನ್ನು ನೋಂದಣಿ ಮಾಡಿಸಿದ 2 ಪ್ರಕರಣಗಳಲ್ಲಿ ರೂ.1.90 ಲಕ್ಷ ಬೆಳೆ ವಿಮೆ ಹಣ ಪಡೆದ ವಂಚಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ತನಿಖಾ ವರದಿ ನೀಡಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಜಾಜೂರು ಉಪ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿ
– ಶಾಸಕ ಟಿ.ರಘುಮೂರ್ತಿ :
ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜಾಜೂರು ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಶಾಸಕ ಟಿ.ರಘಮೂರ್ತಿ ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪ್ರಶ್ನಿಸಿದ್ದಾರೆ.
ಜಾಜೂರು ಆಂದ್ರ ಪ್ರದೇಶ ಗಡಿಭಾಗದಲ್ಲಿದೆ. ಇಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಅಪಘಾತ ಹಾಗೂ ಕಳ್ಳತನ ಪ್ರಮಾಣ ಹೆಚ್ಚಾಗುತ್ತಿದೆ. ಉಪಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರೆತೆ ಇದೆ. ಇದನ್ನು ಸರಿಪಡಿಸಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಚುಕ್ಕೆ ಗುರುತಲ್ಲದ ಪ್ರಶ್ನೆ ಸಂಖ್ಯೆ 77ರಲ್ಲಿ ಶಾಸಕ ಟಿ.ರಘುಮೂರ್ತಿ ಕೇಳಿದ್ದಾರೆ.
ಜಾಜೂರು ಉಪಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ವಾರ್ಷಿಕವಾಗಿ ಸರಾಸರಿ 32 ಅಪಘಾತ ಮತ್ತು 126 ಅಪರಾಧ ಪ್ರಕರಣಗಳು ದಾಖಲಾಗಿವೆ. ಸದ್ಯ ಅಪಘಾತ ಹಾಗೂ ಕಳ್ಳತನ ತಡೆಗಟ್ಟಲು ಪರುಶುರಾಂಪುರ ಠಾಣೆಯಿಂದ ಅಗತ್ಯ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಲಿಖಿತವಾಗಿ ಉತ್ತರಿಸಿದ್ದಾರೆ.