ಬೆಂಗಳೂರು: ಚಂದನವನದಲ್ಲಿ ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿದ್ದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಬೇರೆಯಾಗಲು ನಿರ್ಧರಿಸಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಈ ಮೂಲಕ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2017ರಲ್ಲಿ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡು 2020 ರ ಫೆಬ್ರುವರಿಯಲ್ಲಿ ಮದುವೆಯಾಗಿದ್ದರು. ಬಳಿಕ ರಾಜ-ರಾಣಿ, ಗಿಚ್ಚಿ ಗಿಲಿ ಗಿಲಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಂದನ್ ಶೆಟ್ಟಿ. ‘ಈ ದಿನ, ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ ಗೌರವಿಸಲು ಕೋರುತ್ತೇವೆ.

ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅವರಿಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಕೈಕೈ ಹಿಡಿದುಕೊಂಡು ವಾಪಸ್‌ ಹೊರಟಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿದ್ದ ಈ ಜೋಡಿಯು ಬೇರ್ಪಡುವುದು ಅವರ ಫಾಲೋಯರ್ಸ್​ಗಳಿಗೆ ಅಚ್ಚರಿಯ ವಿಷಯ. ಹೀಗಾಗಿ ಈ ಕುರಿತು ಬಗೆಬಗೆಯ ಚರ್ಚೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಸಂಜೆಯ ವೇಳೆಗೆ ನಿವೇದಿತಾ ಅವರು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ

ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್‌ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಂದನ್​ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ (ಕೇಸ್ ನಂಬರ್-Mc 3388-/2024) ಕೋರ್ಟ್​ ಮುಂದಕ್ಕೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಪೀಠಕ್ಕೆ ಈ ಪ್ರಕರಣ ಬಂದಿತ್ತು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕಾಯಿತು. ಮೀಡಿಯೇಷನ್ ಸೆಂಟರ್​ನಲ್ಲಿ ವಿಚ್ಛೇದನ ನೀಡದಂತೆ ಸಲಹೆ ಕೊಡುತ್ತಾರೆ. ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ನ್ಯಾಯಾಧೀಶರು ನಿರ್ಧಾರದ ಬಗ್ಗೆ ಕೇಳುತ್ತಾರೆ. ಬಳಿಕ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಾರೆ.
ಜೋಡಿ ಒಟ್ಟಿಗೆ ರೀಲ್ಸ್‌ ಮಾಡಿ ಸಾಕಷ್ಟು ಕ್ರೇಜ್‌ ಪಡೆದುಕೊಂಡಿತ್ತು. ಇತ್ತೀಚೆಗೆ ನಿವೇದಿತಾ ಒಬ್ಬರೇ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಫ್ಯಾನ್ಸ್‌ ಜೋಡಿ ಬೇರೆಯಾಗಿದೆ ಎಂದು ಕಮೆಂಟ್‌ ಮಾಡುತ್ತಿದ್ದರು.