ಬೆಂಗಳೂರು : ಜಮಖಂಡಿ ಮತ್ತು ಅಥಣಿ ನಡುವೆ ಕೃಷ್ಣಾ ನದಿಯ ಸೇತುವೆ ನಿರ್ಮಾಣದ ಯೋಜನೆಯ ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಈ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಹನುಮಂತಪ್ಪ ನಿರಾಣಿ ಅವರು ಈ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.

“ಈ ವಿಚಾರದಲ್ಲಿ ನಮ್ಮ ಇಲಾಖೆಯ ತಪ್ಪಿದೆ. ಕಾರಣ ಅವರು ಸೇತುವೆಯ ಎತ್ತರ ಅಂದಾಜು ಮಾಡುವಾಗ ಸರಿಯಾಗಿ ಮಾಡಿಲ್ಲ. ನೀರಿನ ಪ್ರಮಾಣ ಹೆಚ್ಚಾಗಿ ಹರಿದಾಗ ಅದರ ಎತ್ತರದ ಬಗ್ಗೆ ಸರಿಯಾಗಿ ಲೆಕ್ಕಾಚಾರ ಮಾಡಿಲ್ಲ. ದಾವಣಗೆರೆಯ ಗುತ್ತಿಗೆದಾರರಿಗೆ ಇದರ ಗುತ್ತಿಗೆ ನೀಡಿಲಾಗಿದ್ದು ಆರಂಭದಲ್ಲಿ 24 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು. ಮೊದಲು ಈ ಸೇತುವೆಯನ್ನು 480 ಮೀಟರ್ ನಷ್ಟು ಉದ್ದ, 533 ಮೀ ಎತ್ತರ ಮಾಡಲು ತೀರ್ಮಾನಿಸಲಾಗಿತ್ತು. ಈಗ ಸೇತುವೆ ಗಾತ್ರವನ್ನು ಪರಿಷ್ಕರಿಸಿ ಇದನ್ನು ಕ್ರಮವಾಗಿ 680 ಹಾಗೂ 534 ಮೀ.ಗೆ ಏರಿಕೆ ಮಾಡಲಾಗಿದೆ. ಇದರ ಅಂದಾಜು ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸಲಾಗಿದೆ. ಉಪ ಸಮಿತಿ ಇದಕ್ಕೆ ಅನುಮತಿ ನೀಡಿದ್ದು ಮಂಡಳಿ ಸಭೆಯಲ್ಲಿ ಇದನ್ನು ಪಾಸ್ ಮಾಡಲಾಗಿದೆ. ಹೆಚ್ಚುವರಿ 40 ಕೋಟಿಗೆ ಸರ್ಕಾರ ಅನುಮತಿ ನೀಡಿದ್ದು, ಆದಷ್ಟು ಬೇಗ ಈ ಕಾಮಗಾರಿ ಆರಂಭಿಸಲಾಗುವುದು” ಎಂದು ತಿಳಿಸಿದರು.

*ಹಣಕಾಸಿನ ಸ್ಥಿತಿ ನೋಡಿಕೊಂಡು ಕೆರೆಗೆ ನೀರು ತುಂಬಿಸುವ ಯೋಜನೆ ಮಾಡುತ್ತೇವೆ:*
ವೈ.ಎಂ ಸತೀಶ್ ಅವರು ಕುಡಿಯುವ ನೀರಿನ ಸಮಸ್ಯೆ, ಸಂಡೂರು ಕೆರೆ ತುಂಬಿಸುವ ಯೋಜನೆ, ಕೊಟ್ಟೂರು ಭಾಗದಲ್ಲಿ 16 ಕೆರೆ ತುಂಬಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, “ಇವು ಬಳ್ಳಾರಿ ಗ್ರಾಮಾಂತರ ಭಾಗದ ಹೊಸ ಯೋಜನೆಗಳಾಗಿವೆ. ಇನ್ನು ಕುಡಿಯುವ ನೀರಿನ ಪೂರೈಕೆಗೆ 48 ಕೋಟಿ ಮೊತ್ತದ ಯೋಜನೆ ಅಂದಾಜಿಸಲಾಗಿದೆ. ಕೊಟ್ಟುರಿನ 16 ಕೆರೆ ತುಂಬಿಸಲು 399 ಕೋಟಿ ಅಂದಾಜಿಸಲಾಗಿದೆ. ಸಂಡೂರು ತಾಲೂಕಿನ ಕೆರೆ ತುಂಬಿಸಲು 1355 ಕೋಟಿ ಅಂದಾಜಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ಅನುದಾನ ಬರಬೇಕಿತ್ತು. ಬೊಮ್ಮಾಯಿ ಅವರು ಕೂಡ ಸಿಎಂ ಆಗಿದ್ದಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಮಾತು ಕೊಟ್ಟರೂ ಹಣ ನೀಡಲಿಲ್ಲ. ನಮ್ಮ ಇಲಾಖೆಯ ಬಜೆಟ್ ಕೂಡ 19 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಹಣಕಾಸಿನ ಸಾಧ್ಯತೆ ನೋಡಿಕೊಂಡು ನಾವು ತೀರ್ಮಾನ ಮಾಡುತ್ತೇವೆ. ನಮ್ಮ ಇಲಾಖೆಯಲ್ಲಿ ಈಗಾಗಲೇ 1.25 ಲಕ್ಷ ಕೋಟಿಯಷ್ಟು ಕಾಮಗಾರಿಗಳು ನಡೆಯುತ್ತಿವೆ. ಈಗ ನಡೆಯುತ್ತಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ 10ರಿಂದ 15% ಬಿಲ್ ಪಾವತಿ ಮಾಡುವ ಪರಿಸ್ಥಿತಿ ಇದೆ. ನಿಮ್ಮ ಭಾಗದಲ್ಲಿ ನವಲಿ ಜಲಾಶಯದ ಯೋಜನೆ ಬಗ್ಗೆ ನಾವು ಗಮನ ಹರಿಸುತ್ತಿದ್ದು ಚುನಾವಣೆ ಮುಗಿದ ನಂತರ ಎರಡೂ ರಾಜ್ಯಗಳ ಜತೆ ಚರ್ಚೆ ಮಾಡುತ್ತೇವೆ. ಈ ಯೋಜನೆಗೂ ಹಣ ಮೀಸಲಿಡುತ್ತಿದ್ದೇವೆ. ಈ ಭಾಗದಲ್ಲಿರುವ ಖನಿಜ ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡುವ ಬಗ್ಗೆ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಅವರು ಒಪ್ಪಿದರೆ ಈ ಸಮಸ್ಯೆಗಳು ಬಗೆಹರಿಯಲಿವೆ” ಎಂದು ಮಾಹಿತಿ ನೀಡಿದರು.

*ಮಧ್ಯ ಪ್ರದೇಶದ ಹನಿ ನೀರಾವರಿ ಮಾದರಿ ಜಾರಿಗೆ ಆಲೋಚನೆ:*
ಶರಣಗೌಡ ಪಾಟೀಲ ಬಯ್ಯಾಪುರ ಅವರು ನಂದಾಡಗಿ ಏತ ನೀರಾವರಿ, ಹನಿ ನೀರಾವರಿ ಕಾಮಗಾರಿ ವಿಚಾರವಾಗಿ ಕೇಳಿದಾಗ, “ನಾನು ಬೊಮ್ಮಾಯಿ, ಕಾಶಪ್ಪನವರ ಕ್ಷೇತ್ರದಲ್ಲಿ ಹನಿ ನೀರಾವರಿ ಯೋಜನೆಗಳ ಉದ್ಘಾಟನೆಗೆ ನಾನು ಹೋಗಿದ್ದೆ. ನಮ್ಮ ರೈತರು ಈ ವಿಚಾರದಲ್ಲಿ ಯೋಜಿತವಾಗಿ ಆಲೋಚಿಸಿಲ್ಲ. ಅನೇಕ ಕಡೆಗಳಲ್ಲಿ ಹನಿ ನೀರಾವರಿಗೆ ನೀಡುವ ಪೈಪ್ ಗಳನ್ನು ಕಿತ್ತೆಸೆಯಲಾಗಿದೆ. ಮಧ್ಯಪ್ರದೇಶದಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದ್ದಾರೆ. ಅದರಲ್ಲಿ ಜಮೀನಿನವರೆಗೂ ನೀರನ್ನು ತಲುಪಿಸುವ ಜವಾಬ್ದಾರಿ ಸರ್ಕಾರದ್ದಾಗಿದ್ದು, ಜಮೀನಿನ ಒಳಗೆ ನೀರನ್ನು ಬಳಸಿಕೊಳ್ಳುವ ಜವಾಬ್ದಾರಿ ರೈತರಿಗೆ ವಹಿಸಲಾಗುತ್ತಿದೆ. ನಾನು ಅದನ್ನು ನೋಡಿ ಈ ಭಾಗದಲ್ಲಿ ಅದೇ ಮಾದರಿ ಅಳವಡಿಸುವ ಬಗ್ಗೆ ಆಲೋಚನೆ ಇದೆ. ಇದರಿಂದ ರೈತರಿಗೂ ಹೊಣೆಗಾರಿಕೆ ಇರುವಂತೆ ಮಾಡಬಹುದು. ಸಧ್ಯದಲ್ಲೇ ಈ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದರು.

*ಕೃಷ್ಣಾ ಮೇಲ್ದಂಡೆ 3ನೇ ಹಂತ ಯೋಜನೆ ಅಧಿಸೂಚನೆಗೆ ಕಾಯುತ್ತಿದ್ದೇವೆ:*
ಪ್ರಹ್ಲಾದ್ ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಳಿದಾಗ, “ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಬಗ್ಗೆ ಪೂಜಾರ್ ಅವರಿಗೆ ಸಂಪೂರ್ಣ ಮಾಹಿತಿ ಇದೆ. 2010ರಲ್ಲಿ ರಾಜ್ಯಕ್ಕೆ 173 ಟಿಎಂಸಿ ಬಂದಿದೆ. ಈ ವಿಚಾರವಾಗಿ ನೋಟಿಫಿಕೇಷನ್ ಆಗುವುದಕ್ಕೆ ನಾವು ಕಾಯುತ್ತಿದ್ದೇವೆ. 2017ರಲ್ಲಿ 52 ಸಾವಿರ ಕೋಟಿ ಅಂದಾಜು ಮಾಡಲಾಗಿತ್ತು. 1,33,867 ಎಕರೆ ಭೂಸ್ವಾಧೀನ ಮಾಡಬೇಕಾಗಿದೆ. ಈವರೆಗೂ 28 ಸಾವಿರ ಎಕರೆ ಭೂಸ್ವಾಧೀನ ಮಾಡಲಾಗಿದೆ. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಹೊಸ ತೀರ್ಮಾನ ಮಾಡಿ ಭೂಸ್ವಾಧಿನಕ್ಕೆ ಒಣ ಭೂಮಿಗೆ 20 ಲಕ್ಷ ನೀಡಬೇಕು, ನೀರಾವರಿ ಭೂಮಿಗೆ 24 ಲಕ್ಷ ನೀಡಲು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ನನಗೆ ಯೋಜನೆ ಏನಾದರೂ ಆಗಲಿ ಭೂಸ್ವಾಧೀನ ಈಗಿನಿಂದಲೇ ಮಾಡಿ ಎಂದು ಒತ್ತಡ ಬರುತ್ತಿದೆ. ಇರುವ ಯೋಜನೆ ಪೂರ್ಣಗೊಳಿಸಬೇಕು ಎಂದು ಮುಂದಾಗಿದ್ದೇವೆ. ಭೂಸ್ವಾಧೀನಕ್ಕೆ ನಮ್ಮ ಆದ್ಯತೆ ಇದೆ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕೈಗೊಳ್ಳುತ್ತೇವೆ. ಈ ಭಾಗದಲ್ಲಿ ಪುನರ್ವಸತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ” ಎಂದು ತಿಳಿಸಿದರು.

*ಬೆಂಗಳೂರಿನಲ್ಲಿ ಇನ್ನೂ 372 ಕೋಟಿ ಶೌಚಾಲಯ ನಿರ್ಮಾಣ:*
ಭಾರತಿ ಶೆಟ್ಟಿ ಅವರು ಮಹಿಳಾ ಶೌಚಾಲಯದ ಬಗ್ಗೆ ಕೇಳಿದ ಪ್ರಶ್ನೆಗೆ, “ಇಂತಹ ವಿಚಾರವಾಗಿ ಗಮನಹರಿಸಿರುವ ಭಾರತಿ ಶೆಟ್ಟಿ ಅವರಿಗೆ ನಾನು ಅಭಿನಂದಿಸುತ್ತೇನೆ. ಬೇರೆ ಪ್ರತಿನಿಧಿಗಳು ಕೂಡ ಈ ಬಗ್ಗೆ ಆಲೋಚನೆ ಮಾಡಬೇಕು. ಇಂತಹ ವಿಚಾರದಲ್ಲಿ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಈ ವಿಚಾರವಾಗಿ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಬೇಕು. ಇನ್ನು ಸಾರ್ವಜನಿಕ ಶೌಚಾಲಯಗಳಲ್ಲಿ ಶುಲ್ಕದ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಉಳಿದಂತೆ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಹೆಚ್ಚಿನ ಶೌಚಾಲಯ ಮಾಡಬೇಕಿದೆ. ಬೆಂಗಳೂರಿನಲ್ಲಿ ಈಗಾಗಲೇ 957 ಶೌಚಾಲಯಗಳಿದ್ದು, ಇನ್ನು 372 ಶೌಚಾಲಯ ಕಟ್ಟುವ ಆಲೋಚನೆ ಇದೆ. ಬಸ್ ನಿಲ್ದಾಣ, ಪಾದಚಾರಿ ಮಾರ್ಗ, ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು. ಈ ಶೌಚಾಲಯಗಳನ್ನು ಉಚಿತ ಮಾಡುವ ವಿಚಾರದಲ್ಲಿ ಇವುಗಳ ನಿರ್ವಹಣೆ ಮಾಡುವವರು ಬೇಕು. ಈ ವಿಚಾರವಾಗಿ ಪರಿಶೀಲನೆ ಮಾಡುತ್ತೇವೆ” ಎಂದು ಉತ್ತರಿಸಿದರು.