ಹೈದರಾಬಾದ್ :
ತೆಲಂಗಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತಗಳಿಸಿದ್ದು, ಬಿಜೆಪಿ ಮತ್ತು ಸರ್ಕಾರದ ಜವಾಬ್ದಾರಿಯನ್ನು ಆ ಪಕ್ಷ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ವಹಿಸಿದೆ.

ಹೀಗಾಗಿ ಹಸ್ತ ಪಕ್ಷಕ್ಕೆ ಆಪರೇಷನ್ ನಡೆಯದಂತೆ ಅವರು ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸರ್ಕಾರಕ್ಕೆ ಯಾವುದೇ ಅಡ್ಡಿ, ಆತಂಕ ಎದುರಾಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ರೇವಂತ್ ರೆಡ್ಡಿ ಸಿಎಂ ಆಗಿ ಅಧಿಕಾರ ಸ್ವೀಕರಿಸುವವರೆಗೂ ಡಿಕೆಶಿ ಅಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್, ಡಿಸೆಂಬರ್‌ 4 ಅಥವಾ 9ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಹೈದರಾಬಾದ್‌ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮೈದಾನದಲ್ಲಿ ಸಮಾರಂಭ ನಡೆಯುವ ನಿರೀಕ್ಷೆ ಇದೆ.

ಪದಗ್ರಹಣ ಸಮಾರಂಭಕ್ಕಾಗಿ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ರಾಜ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಅವರು ಡಿಜಿಪಿಗೆ ಹೇಳಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

 

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ರಚನೆ ಮಾಡಲು ತಮಗೆ ಅನುಮತಿ ನೀಡಬೇಕೆಂದು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಕಮ್ ಟಾಗೂರ್, ಡಿಸಿಎಂ ಡಿ ಕೆ ಶಿವಕುಮಾರ್, ತೆಲಂಗಾಣ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಹಿರಿಯ ಮುಖಂಡ ಉತ್ತಮ್ ರೆಡ್ಡಿ ಮತ್ತಿತರರು ರಾಜ್ಯಪಾಲರಾದ ತಮಿಳ್ ಸೆಲ್ವಿ ಅವರನ್ನು ಹೈದರಾಬಾದ್ ರಾಜಭವನದಲ್ಲಿ ಭಾನುವಾರ ರಾತ್ರಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಹೈದರಾಬಾದ್ ನಲ್ಲಿ ಸೋಮವಾರ ಬೆಳಗ್ಗೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಲ್ಪಿ ನಾಯಕನ ಆಯ್ಕೆ ಆಗಲಿದ್ದು, ಅವರು ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಪ್ರತಿಪಾದಿಸಿ, ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿ ಮಾಡುವಂತೆ ಕೋರಿಕೆ ಸಲ್ಲಿಸಲಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಹೈದರಾಬಾದ್ ಕಾಂಗ್ರೆಸ್ ಕಚೇರಿ ಗಾಂಧಿಭವನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಮಧ್ಯಾಹ್ನ ತೆಲಂಗಾಣ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಹಿರಿಯ ಮುಖಂಡ ಉತ್ತಮ್ ರೆಡ್ಡಿ ಮತ್ತಿತರರಿಗೆ ಸಿಹಿ ತಿನ್ನಿಸಿ, ಅಭಿನಂದಿಸಿ, ಸಂಭ್ರಮಿಸಿದರು. ಕರ್ನಾಟಕದ ಹಿರಿಯ ಸಚಿವ ಕೆ ಜೆ ಜಾರ್ಜ್, ಬೋಸರಾಜ್ ಮತ್ತಿತರರು ಇದ್ದರು.