ಬೈಲಹೊಂಗಲ- ನ. 13 ರಂದು ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ತಮ್ಮ 86 ನೇ ವಯಸ್ಸಿನಲ್ಲಿ ಎಂಟು ದಿನಗಳ ನಂತರ ನ.20 ರಂದು ಸಂಜೆ 5 ದೇವಲಾಪೂರ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು.
ಇವರ ಅಂತಿಮ ದಹನಕ್ರೀಯಾದಿ ವಿಧಿ ವಿಧಾನಗಳು (ನ.21) ಮುಂಜಾನೆ 11 ಗಂಟೆಗೆ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಜರುಗಲಿದೆ. ಅಪಾರ ಭಕ್ತ ಸಮೂಹ ಹೊಂದಿದ್ದ ಮುನಿಗಳು ದೇವಲಾಪೂರ ಗ್ರಾಮದಲ್ಲಿ ಅಷ್ಟಮ ನಂದೀಶ ಕ್ಷೇತ್ರದ ಸಂಸ್ಥಾಪಕರಾಗಿದ್ದರು. ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿದ್ದಾರೆ. 300 ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಲೌಕೀಕ ಶಿಕ್ಷಣದೊಂದಿಗೆ ಧಾರ್ಮಿಕ, ಮೌಲ್ಯ ಶಿಕ್ಷಣ ನಡೆದಿದೆ. ಕುಲಭೂಷಣ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನರ ಆರ್ಥಿಕತೆಗೆ ಅನುಕೂಲತೆ ಮಾಡಿದ್ದರು. ಧಾರವಾಡ, ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೀನ ಮಂದಿರಗಳನ್ನು ಕಟ್ಟಿಸಿ ಜನರ ಕಲ್ಯಾಣಕ್ಕೆ ನೆರವಾಗಿದ್ದರು. ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಜಯಕೀರ್ತಿ ವಿದ್ಯಾಪೀಠ, ಸಹಕಾರಿ ಸಂಘ, ಜೀನ ಮಂದಿರಗಳನ್ನು ನಿರ್ಮಿಸಿದ್ದಾರೆ. ಪೂಜ್ಯರು 108 ಸಮೇದ ಶಿಖರಜಿಯ ಯಾತ್ರೆ, 5 ಬಾರಿ ಸಂಘದೊಂದಿಗೆ ಪಾದಯಾತ್ರೆ ಕೂಡಾ ಮಾಡಿದ್ದಾರೆ.
ಮುನಿಗಳು ಗರಗ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಸ್ವ ಸಾಧನೆಯಿಂದ ತಹಶೀಲ್ದಾರ ಹುದ್ದೆಯ ಮೂಲಕ ಜನಸೇವೆ ಮಾಡಿ ನಂತರ ನಿವೃತ್ತಿ ನಂತರ ಮುನಿ ಧೀಕ್ಷೆ ಪಡೆದು ಲೋಕ ಕಲ್ಯಾಣಕ್ಕಾಗಿ, ಧರ್ಮ ಜಾಗೃತಿಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಅಪಾರ ಭಕ್ತ ಸಮೂಹ ಮರಣ ಮಹೋತ್ಸವ ಆಚರಣೆಯಲ್ಲಿ ತೊಡಗಿದೆ.
ಶೋಕ ಸಂದೇಶ
ಬೈಲಹೊಂಗಲ ತಾಲೂಕು ದೇವಲಾಪುರ ಗ್ರಾಮದ ಶ್ರೀ ಅಷ್ಟಮ ನಂದಿಕೇಶ್ವರ ಕ್ಷೇತ್ರದ ಪ್ರವರ್ತಕರಾದ ಪರಮಪೂಜ್ಯ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರು ಸಲ್ಲೇಖ ವ್ರತ ಸಮಾಧಿಯಾಗಿದ್ದಾರೆ. ಜೈನ ಧರ್ಮ ಅಹಿಂಸೆಯ ಮೂಲಕ ಮಲೋಕಶಾಂತಿಯ ಮತ್ತು ಲೋಕದ ಹಿತವನ್ನು ಬಯಸುವ ಧರ್ಮವಾಗಿದೆ. ಇದಕ್ಕೆ ಪ್ರೇರಣದಾಯಕವಾಗಿ ಸಲ್ಲೇಖ ವ್ರತದೊಂದಿಗೆ ಸಮಾಧಿಯಾದ ಪರಮಪೂಜ್ಯರೂ ಕೂಡ ಪ್ರೇರಣಾದಾಯಿಗಿದ್ದರು,
ಸ್ವಾಮೀಜಿಗಳ ಅಗಲುವಿಕೆ ಕೇವಲ ಜೈನ ಸಮುದಾಯಕ್ಕೆ ಮಾತ್ರವಲ್ಲ ನಾಡಿನ ಇಡೀ ಸಮುದಾಯಕ್ಕೆ ನಷ್ಟವಾಗಿದೆ, ಸಾವನ್ನು ಅರಿತು ಒಪ್ಪಿಕೊಳ್ಳುವ ಸಾಧನೆಯ ಮಾರ್ಗದಲ್ಲಿ ಸಾಗಿದ ಪುಣ್ಯ ಯತಿಗಳ ನಿಷ್ಠೆ ಜೀವನ್ಮುಕ್ತಿಯಡೆ ಸಾಗುವ ಅವರ ಪಥ ವಿವರಿಸಲು ಸಾಧ್ಯವಿಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು ಉತ್ತರಕನ್ನಡ ಕ್ಷೇತ್ರ.