ಮದ್ದೂರು : “ನನ್ನ ಅಜ್ಜಯ್ಯನ ಸುದ್ದಿಗೆ ಬರಬೇಡ. ಅಜ್ಜಯ್ಯನ ಶಕ್ತಿ ಏನು ಎಂಬುದು ನಿನಗೇನು ಗೊತ್ತು? ಅವರ ಶಕ್ತಿ ನನಗೆ ಮಾತ್ರ ಗೊತ್ತು. ಏತಕ್ಕೆ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದೆ? ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲು ಹಾಕಿದರು.
ಮದ್ದೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, “ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೆ? ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ” ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ
ವಿಜಯೇಂದ್ರ, ಅಶೋಕ್ ಅವರೇ.., ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲೇ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದು ನಿಮಗೆ ಸಹಿಸಲು ಆಗುತ್ತಿಲ್ಲ. ಬಡವರಿಗೆ ಕೆಲಸ ಮಾಡುವ ಅವಕಾಶ ಬಿಜೆಪಿ, ಜೆಡಿಎಸ್ ಅವರಿಗೆ ಸಿಗದ ಕಾರಣಕ್ಕೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದರು.
“ಕುಮಾರಸ್ವಾಮಿ ನಾವು ನಿಮ್ಮ ಪೆನ್ ಡ್ರೈವ್ ವಿಚಾರಕ್ಕೆ ಬಂದಿದ್ದೇವೆಯೇ? ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು, ನಿನ್ನ ಕುಟುಂಬವುಂಟು. ಪೆನ್ ಡ್ರೈವ್ ಹಿಂದೆ ಮಹಾನಾಯಕ, ಉಪಮುಖ್ಯಮಂತ್ರಿ ಇದ್ದಾರೆ ಎಂದು ಹೇಳಿದ್ದರು. ಈ ಮಾತಿಗೆ ಬದ್ದನಾಗಿ ಇರಬೇಕಿತ್ತು. ನೀವು ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಇದು ಇವತ್ತಿನದಲ್ಲ, 1985 ರಿಂದ ನಿಮ್ಮ ಕುಟುಂಬದ ಹಾಗೂ ನನ್ನ ನಡುವೆ ತಿಕ್ಕಾಟ ನಡೆಯುತ್ತಿದೆ” ಎಂದು ಹೇಳಿದರು.
ಕುಟುಂಬವಿಲ್ಲ ಎಂದವನಿಗೆ ಕುಟುಂಬ ಹೇಗೆ ಬಂತು
“ಈಗ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಹಾಕಿ ಹೇಳಿಕೆ ನೀಡಿ ಏಕೆ ಓಡಿ ಹೋಗುತ್ತಾ ಇದ್ದಿಯಾ? ಅವನು ಯಾರೋ ಪ್ರೀತಂ ಗೌಡ ನನ್ನ ಕುಟುಂಬದ ಮರ್ಯಾದೆ ತೆಗೆದಿದ್ದಾನೆ ಎಂದು ಹೇಳಿದೆ. ಆದರೆ ಇದಕ್ಕೂ ಮೊದಲು ರೇವಣ್ಣನದ್ದೇ ಬೇರೆ ಕುಟುಂಬ ನನ್ನದೇ ಬೇರೆ ಕುಟುಂಬ, ನಾವು ಭಾಗವಾಗಿದ್ಧೇವೆ ಎಂದು ಹೇಳಿದ್ದೇ. ಈಗ ಎಲ್ಲಿಂದ ಬಂತು ಕುಟುಂಬ? ನಾವು ನಿನ್ನ ಕುಟುಂಬದ ವಿಚಾರಕ್ಕೆ ಕೈ ಹಾಕುವುದಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯ ದೇವರಾಜೇಗೌಡನಿಂದ ಪತ್ರ ಬರೆಸಿದವನು ನೀನೆ ಅಲ್ಲವೇ” ಎಂದು ಪ್ರಶ್ನಿಸಿದರು.
“ಮುಖ್ಯಮಂತ್ರಿಯನ್ನಾಗಿ ಮಾಡಿದ ನಿಮ್ಮ ವಿರುದ್ದವೇ ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದಾರಲ್ಲಾ ಸರಿಯೇ ಎಂದು ಯಾರೋ ಪ್ರಶ್ನಿಸಿದರು. ಅದಕ್ಕೆ ನಾನು ಹೇಳಿದೆ ಸ್ವಂತ ಅಣ್ಣ, ತಮ್ಮಂದಿರನ್ನೇ ಸಹಿಸುವುದಿಲ್ಲ. ಇನ್ನು ನನ್ನ ಹಾಗೂ ಚಲುವರಾಯಸ್ವಾಮಿ ಅವರನ್ನು ಸಹಿಸುತ್ತಾನೆಯೇ? ಮಂಡ್ಯ ಸಂಸದನಾದ ಕಾರಣಕ್ಕೆ ಇಷ್ಟೆಲ್ಲಾ ಹೇಳುತ್ತಿದ್ದೇನೆ. ನಾನು ಅವನ ಮಗನನ್ನು ಗೆಲ್ಲಿಸಲು ನೋಡಿದೆ. ಆದರೆ ಜನ ಸೋಲಿಸಿದರು” ಎಂದರು.
“ಮಂಡ್ಯ ಮತ್ತು ಹಾಸನಕ್ಕೆ ದೊಡ್ಡ ಕೈಗಾರಿಕೆಗಳನ್ನು ತಂದು ತಲಾ 10 ಸಾವಿರ ಜನರಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿದ್ದೀರಿ. ನೀವು ಈ ಕೆಲಸ ಮಾಡಿದರೆ ನನ್ನ ಹಾಗೂ ಚಲುವರಾಯಸ್ವಾಮಿ ಅವರ ಸಂಪೂರ್ಣ ಬೆಂಬಲವಿರುತ್ತದೆ” ಎಂದು ಹೇಳಿದರು.
ಕಬ್ಬಿಣದ ಮಂತ್ರಿ ಕುಮಾರಣ್ಣ
ಕಬ್ಬಿಣದ ಮಂತ್ರಿ ಕುಮಾರಣ್ಣ. ನೀವು ಮತ್ತು ಬಿಜೆಪಿಯವರು ಕತ್ತರಿ ತಯಾರು ಮಾಡುವವರು. ನಾವು ಸೂಜಿ ತಯಾರು ಮಾಡುತ್ತೇವೆ. ನೀವು ಸಮಾಜವನ್ನು ಕತ್ತರಿಸುವವರು, ನಾವು ಸಮಾಜವನ್ನು ಹೊಲಿಯುವವರು. ಜಾತಿ, ಧರ್ಮ, ಕುಟುಂಬ ಎಂದು ಕತ್ತರಿಸುತ್ತೀರಿ. ಆದರೆ ನಾವು ಎಲ್ಲರನ್ನು ಒಂದುಗೂಡಿಸುತ್ತೇವೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ. ಕುಮಾರಣ್ಣ ಈ ಹಿಂದೆ ಏನೇನು ಮಾತನಾಡಿದ್ದೆ. ಯಾರ ಗುಣಗಾನ ಮಾಡಿದ್ದೆ ಎಲ್ಲವನ್ನು ಮೈಸೂರು ಮತ್ತು ಮಂಡ್ಯದಲ್ಲಿ ತೋರಿಸುತ್ತೇವೆ. ನಿನ್ನ ಮಾತು, ಗುಣಗಾನ, ಬಿಜೆಪಿ ಗುಣಗಾನ, ನಿಮ್ಮದು ಅವರದ್ದು ವಾಕ್ಸಮರ ಎಲ್ಲವನ್ನೂ ತೋರಿಸುತ್ತೇನೆ” ಎಂದರು.
ನನ್ನ, ನಿನ್ನ ಆಸ್ತಿಯ ಪಟ್ಟಿಯಿದೆ. ನಿನ್ನ ಬೇನಾಮಿಯಾದ ಸಹೋದರನ ಆಸ್ತಿಯ ಪಟ್ಟಿ ಕೊಡಪ್ಪಾ. ನೀನು ಅಧಿಕಾರದಲ್ಲಿ ಇದ್ದಾಗ ಕನಕಪುರ ಸೇರಿದಂತೆ ಇತರೆಡೆ ಮಾಡಿರುವ ಪಟ್ಟಿ ಹೇಳಿದ್ದೇನೆ. ನೀನು ಒಂದು ಪಟ್ಟಿ ಕೊಡು ಹಾಗೂ ಮೊದಲು ಪಾದಯಾತ್ರೆ ಏಕೆ ಬೇಡ ಎಂದು ಹೇಳಿದೆ ನಂತರ ಏಕೆ ಒಪ್ಪಿಕೊಂಡೆ ಇದಕ್ಕೆ ಮೊದಲು ಉತ್ತರಿಸು” ಎಂದು ಆಗ್ರಹಿಸಿದರು.
ಲೂಟಿಗೆ ಉತ್ತರ ಕೊಡಿ
“ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಎಪಿಎಂಸಿಯಿಂದ 47 ಕೋಟಿ ಲೂಟಿ. ಭೋವಿ ಅಭಿವೃದ್ದಿ ನಿಗಮದಲ್ಲಿ 87 ಕೋಟಿ, ದೇವರಾಜು ಅರಸು ಟ್ರಕ್ ಟರ್ಮಿನಲ್ 50 ಕೋಟಿ, ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ, ಕೊರೋನಾ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದರು. ಪಿಎಸ್ ಐ ಹಗರಣ, ಪರಶುರಾಮ ಪ್ರತಿಮೆ ಹಗರಣ, ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ 700 ಕೋಟಿಗೂ ಹೆಚ್ಚು ಅಕ್ರಮ ಹಣದ ದಾಖಲೆಗಳು ದೊರೆಯಿತು. ಅಂಗನವಾಡಿಯ ಮಕ್ಕಳ ಮೊಟ್ಟೆ ಹಗರಣ. ಕುಮಾರಸ್ವಾಮಿ ಅವರ ಗಣಿ ಹಗರಣದ ಬಗ್ಗೆ ಆನಂತರ ಮಾತನಾಡುತ್ತೇನೆ” ಎಂದರು.
ಮುಸ್ಲಿಮರಿಗೆ ಧಮ್ಕಿ ದುರದೃಷ್ಟಕರ
ನಮಗೆ ಮತ ನೀಡದ ಮುಸ್ಲಿಮರ ಗತಿ ಏನಾಗುತ್ತದೆ ನೋಡಿ ಎಂದು ಕುಮಾರಸ್ವಾಮಿ ಅವರು ಧಮ್ಕಿ ಹಾಕಿದ್ದಾರೆ. ನೀವು, ನಿಮ್ಮ ತಂದೆ ಮುಸ್ಲಿಂ ಮತದಾರರು ಇಲ್ಲದಿದ್ದರೇ ವಿಧಾನಸಭೆಗೆ ಹೋಗುತ್ತಲೇ ಇರಲಿಲ್ಲ. ಮಿಸ್ಟರ್ ಕುಮಾರಸ್ವಾಮಿ ನಿಮ್ಮ ತಂದೆ ʼಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆʼ ಎಂದು ಹೇಳಿದ್ದರು. ಈ ಮಾತು ಮರೆಯಬೇಡಿ ನೆನಪಿನಲ್ಲಿಟ್ಟುಕೊಳ್ಳಿ” ಎಂದು ಹೇಳಿದರು.
ನಮ್ಮ ದೇಶ ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಎಸ್.ಎಂ.ಕೃಷ್ಣ ಅವರು ಕುವೆಂಪು ಅವರು ಬರೆದ ಹಾಡನ್ನು ನಾಡಗೀತೆಯನ್ನಾಗಿ ಘೋಷಣೆ ಮಾಡಲಾಯಿತು. ಇದರಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಕರ್ನಾಟಕವನ್ನು ಕರೆಯಲಾಗಿದೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಯಾರೂ ಬಗ್ಗುವುದಿಲ್ಲ. ಎಲ್ಲಾ ಧರ್ಮದವರು ಸಹೋದರರಂತೆ ಬಾಳಬೇಕು. ನಿಮ್ಮ ಧಮ್ಕಿಗೆ ಯಾವ ಮುಸಲ್ಮಾನ ಬಂಧುಗಳು ಹೆದರುವುದಿಲ್ಲ. ಈ ವಿಚಾರದಲ್ಲಿ ಅವರಿಗೆ ಜ್ಞಾನ, ಪರಿಜ್ಞಾನ ಬರಲಿ” ಎಂದರು.
ನನ್ನ ಅಧ್ಯಕ್ಷತೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿದೆ. ನಿನ್ನ ಅಧ್ಯಕ್ಷತೆಯಲ್ಲಿ ಗೆದಿದ್ದು ಕೇವಲ 19 ಸ್ಥಾನಗಳು ಮಾತ್ರ. ಈಗ ಎರಡು ಸೀಟು ಗೆದ್ದು, ಬಿಜೆಪಿಯವರನ್ನು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದೀಯಾ. ನಿನ್ನ ಮಗ ಹಾಗೂ ಜಿ,ಟಿ.ದೇವೇಗೌಡರು ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಏಕೆ ಹೇಳಿದರು” ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣದಲ್ಲಿ ಒಬ್ಬರಿಗೆ ಒಂದೇ ಒಂದು ಸೈಟು, ಮನೆ, ರೈತರಿಗೆ ಭೂಮಿ ಕೊಟ್ಟಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಒಂದೇ ಒಂದು ಸಹಾಯ ಮಾಡಿಲ್ಲ. ಜೆಡಿಎಸ್ ಅನ್ನು ಬಿಜೆಪಿ ಜೊತೆ ವಿಲೀನ ಮಾಡಿದರೆ ಈ ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದು” ಎಂದರು.
ಎಸ್.ಎಂ.ಕೃಷ್ಣ ಅವರನ್ನು ನೆನೆಸಿಕೊಂಡಿರುವ ಕುಮಾರಸ್ವಾಮಿ ಅವರೇ ಅವರ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇದೆಯೇ? ನೀನು ಪಾದಯಾತ್ರೆ ಮಾಡುತ್ತಿರುವ ರಸ್ತೆ ಕೃಷ್ಣ ಅವರು ಮಾಡಿದ್ದು. ಈ ರೀತಿಯ ಒಂದೇ ಒಂದು ಕೆಲಸ ಮಾಡಿದ್ದೀಯಾ. ಸೋಮನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಮಾಡಿಸಿದ್ದಾರೆ. ಅವರಂತೆ ನಿನಗೆ ಮಾಡಲು ಆಗುತ್ತದೆಯೇ? ಕೇವಲ ಖಾಲಿ, ಬುಡಬುಡಕೆ ಮಾತುಗಳು ಬೇಡ” ಎಂದರು.
ಬ್ರಿಟಿಷರಿಂದಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ
“10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆಯುತ್ತೇವೆ ಎಂದು ಮಿಸ್ಟರ್ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಆಗಲಿಲ್ಲ. ಸರ್ಕಾರ ಒಡೆದುಹಾಕಲು ಇದು ಮಡಕೆಯೇ? ಕಾಂಗ್ರೆಸ್ ಹೋರಾಟಕ್ಕೆ ನಿನ್ನ ಕ್ಷೇತ್ರದ ಹೆಬ್ಬಾಗಿನಲ್ಲೇ ಇರುವ ಶಿವಪುರ ಸತ್ಯಾಗ್ರಹ ಸೌಧವೇ ಸಾಕ್ಷಿ. ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇವುಗಳನ್ನು ನಿಲ್ಲಿಸಬೇಕು ಎನ್ನುವ ಹುನ್ನಾರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಕುಮಾರಸ್ವಾಮಿ, ವಿಜಯೇಂದ್ರ ಯಡಿಯೂರಪ್ಪ, ಆರ್.ಅಶೋಕ್, ಎಲ್ಲಾ ಸೇರಿ ಗ್ಯಾರಂಟಿ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ” ಎಂದರು.
ಕಾಂಗ್ರೆಸ್ ಸರ್ಕಾರವಿರುವ ತನಕ ಗೃಹಲಕ್ಷ್ಮಿ ಹಣ
“2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇವಲ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು ಅಧಿಕಾರಕ್ಕೆ ಬಂದಿಲ್ಲ. ಪಕ್ಷಕ್ಕೆ ಮತ ಹಾಕಿದ 1.70 ಕೋಟಿ ಮತ ಹಾಕಿರುವ ಜನರು ಅದಿಕಾರಕ್ಕೆ ಬಂದಿದ್ದಾರೆ. ಬಡವರ, ಮಹಿಳೆಯರ, ರೈತರ ರಕ್ಷಣೆಗೆ ಈ ಸರ್ಕಾರವನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಎಷ್ಟು ವರ್ಷ ಇರುತ್ತದೆಯೋ ಅಷ್ಟು ವರ್ಷವೂ ನಮ್ಮ ತಾಯಂದಿರ ಖಾತೆಗೆ ಗೃಹಲಕ್ಷ್ಮೀ ಹಣ ಬರುತ್ತದೆ. ಇಂದಿರಾಗಾಂಧಿ ಅವರು ವೃದ್ದಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಅಶಕ್ತರಿಗೆ ಹಣ ನೀಡುವ ಕಾರ್ಯಕ್ರಮ ತಂದರು. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ನೂರಾರು ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಆಗಲಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ ಸರ್ಕಾರ ತಂದಿರುವ ಒಂದೇ ಒಂದು ಜನಪರ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗಿಲ್ಲ. ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್, ಅಂಗನವಾಡಿ. ಆಶಾ ಕಾರ್ಯಕರ್ತರು ಸೇರಿದಂತೆ ಅನೇಕ ಕಾಯಕ್ರಮಗಳನ್ನು ಕಾಂಗ್ರೆಸ್ ತಂದಿದೆ. ನಾವು ತಂದಿರುವ ಯೋಜನೆಗಳನ್ನು ನಿಲ್ಲಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರು ಹಾಗೂ ಪತ್ನಿ ಮಾಡಬಾರದು ತಪ್ಪು ಮಾಡಿದಂತೆ ಬಿಂಬಿಸಲಾಗುತ್ತಿದೆ. ಪಾರ್ವತಮ್ಮ ಅವರಿಗೆ ಅವರ ಅಣ್ಣ ಅರಿಶಿಣ, ಕುಂಕುಮಕ್ಕೆ ಎಂದು ಮೂರು ಎಕರೆ ಜಮೀನು ನೀಡಿದ್ದಾರೆ. ಅದನ್ನು ಮುಡಾ ಒತ್ತುವರಿ ಮಾಡಿಕೊಂಡ ಕಾರಣಕ್ಕೆ ಪರಿಹಾರವಾಗಿ ಸೈಟು ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿದರು.
“ಶಿವಪುರದ ಧ್ವಜ ಸತ್ಯಾಗ್ರಹ ಸೌಧಕ್ಕೆ ಬಿಜೆಪಿಯವರು ಒಮ್ಮೆ ಭೇಟಿ ನೀಡಬೇಕು ಎಂದು ಸಲಹೆ ನೀಡುತ್ತೇನೆ. ಆಗಿನ ಕಾಲದಲ್ಲೇ 10 ಸಾವಿರ ಜನರು ಸೇರಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಜಾಗವಿದು. ಗಂಡು ಭೂಮಿ ಮಂಡ್ಯ ನೂರಾರು ನಾಯಕರನ್ನು ರಾಜ್ಯ ರಾಜಕಾರಣಕ್ಕೆ ನೀಡಿದೆ. ಕೇಂದ್ರ ಮಂತ್ರಿ, ಮುಖ್ಯಮಂತ್ರಿಗಳಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲ ಸಾಹುಕಾರ್ ಚೆನ್ನಯ್ಯ, ವೀರಣ್ಣ ಗೌಡರು, ಮಲ್ಲಯ್ಯ ಅವರು ಇತಿಹಾಸ ಸೃಷ್ಟಿಸಿದ ಭೂಮಿ ಮಂಡ್ಯ” ಎಂದರು
“ಆ.9 ರಂದು ಕ್ವಿಟ್ ಇಂಡಿಯಾ ಚಳುವಳಿ ನಡೆದ ದಿನ. ಅಂದು ವಿಶೇಷ ರೀತಿಯಲ್ಲಿ ಮೈಸೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ಜನಾಂದೋಲನ ಸಭೆ ರಾಜ್ಯ ರಾಜಕರಣದ ಇತಿಹಾಸದ ಪುಟ ಸೇರಲಿದೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡು 100 ವರ್ಷಗಳಾಗಿವೆ. ಇದಕ್ಕಾಗಿ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಇಡೀ ವರ್ಷ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಐದು ಕಾಂಗ್ರೆಸ್ ಹಾಗೂ ಒಂದು ಬೆಂಬಲಿತ ಅಭ್ಯರ್ಥಿಯನ್ನು ಜನ ಗೆಲ್ಲಿಸಿದ್ದಾರೆ. ವಿಧಾನಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯೇ ಬೇರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಜನ ಮೋದಿ ನೋಡಿ ಮತ ನೀಡಿರಬಹುದು. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗುತ್ತದೆ” ಎಂದು ಹೇಳಿದರು.
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ವಿಧಾನಸೌಧದಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಇಂದು (ಆಗಸ್ಟ್ 05) ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಬಿ ಪಾಟೀಲ್, ಅತೀ ಶೀಘ್ರದಲ್ಲೇ ಎರಡನೇ ವಿಮಾನ ನಿಲ್ದಾಣ ಆಗಲಿದೆ. ಅದಕ್ಕಾಗಿ ಏಳು ಸ್ಥಳ ಗಮನಕ್ಕೆ ಇದ್ದು, ಈ ಬಗ್ಗೆ ಸಾಧಕ ಬಾಧಕ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರ ಹಾಗೂ ಕರ್ನಾಟಕದ ಜನರಿಗೆ ಅನುಕೂಲ ಆಗಬೇಕು. ರಾಜಕೀಯ ಬಿಟ್ಟು ಎಲ್ಲರಿಗೂ ಅನುಕೂಲ ಆಗುವಂತೆ ನಿರ್ಧಾರ ಕೈಗೊಳ್ಳುವ ಕೆಲಸ ಆಗಬೇಕು ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಈಗ ಇರುವು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇರೋದೇ ಎರಡು ರನ್‌ವೇ, ಮುಂದಕ್ಕೆಎರಡು ರನ್ ವೇ ಸಾಲದು. ಅದಕ್ಕೆ ಮುಂಜಾಗ್ರತವಾಗಿ ಎರಡನೇ ಏರ್ ಪೋರ್ಟ್ ಮಾಡಬೇಕು ಎಂದು ಹತ್ತಾರು ಸಭೆಗಳು ಆಗಿವೆ.ಈಗಲೇ ಇದರ ಬಗ್ಗೆ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ಏಳೆಂಟು ಜಾಗ ನೋಡಿಕೊಂಡಿದ್ದಾರೆ ಎಂದು ಹೇಳಿದರು.
ನೀರು, ರಸ್ತೆ ಸೇರಿ ಹಲವು ಸೌಕರ್ಯ ನೋಡಿಕೊಂಡು ಏರ್ ಪೋರ್ಟ್ ಆಗಬೇಕು. ಹಾಗೇ ಭೂಮಿ, ಗುಡ್ಡ ಗಾಡು ನೋಡಿಕೊಂಡು ಆಯ್ಕೆ ಮಾಡುತ್ತಾರೆ. ಇಂದಿನ ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ಸಿಎಂ ಜೊತೆ ಚರ್ಚಿಸಬೇಕಾಗಿದೆ. ಇದೆಲ್ಲಾ ಆದ್ಮೇಲೆ ದೆಹಲಿಗೆ ವರದಿ ಕಳಿಸಬೇಕಾಗುತ್ತದೆ. ಅವರು ಬಂದು ಎಲ್ಲ ವರದಿ ನೋಡಿ ಯಾವ ಸ್ಥಳದಲ್ಲಿ ಏರ್ ಪೋರ್ಟ್ ಮಾಡಲಿದ್ದಾರೆ? ಯಾವಾಗ ಅನುಮತಿ ನೀಡುತ್ತಾರೆ ಅಂದಿನಿಂದ ಕೆಲಸ ಆಗಬೇಕು. 2034ರೊಳಗೆ ಹೊಸ ಏರ್ಪೋರ್ಟ್ ಕೆಲಸ ನಡೆಯಬೇಕು. ಇದಕ್ಕೆ ಸುಮಾರು ನಾಲ್ಕು ಸಾವಿರ ಎಕರೆ ಜಾಗ ಬೇಕಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರು ದೊಡ್ಡ ವಿಮಾನ ನಿಲ್ದಾಣವಾಗಿದೆ. ದೆಹಲಿ,ಮುಂಬೈ ಬಿಟ್ಟರೆ ಮೂರನೆಯದ್ದೇ ಬೆಂಗಳೂರು ಏರ್ ಪೋರ್ಟ್. 150 ಕಿಲೋ ಮೀಟರ್ ನಡುವೆ ನಿಲ್ದಾಣ ಮಾಡುವಂತಿಲ್ಲ. ಈಗ ಎರಡು ರನ್ ವೇ ಗಳಿವೆ. ಇಲ್ಲಿರುವ ಗ್ರೋಥ್ ಗೆ ಈ ಎರಡು ರನ್ ವೇ ಸಾಕಾಗಲ್ಲ. ಒಪ್ಪಂದ ಮುಗಿಯುವುದೊರಳಗೆ ಮತ್ತೊಂದು ಮಾಡಬೇಕು. ಅದು 2034ಕ್ಕೆ ಕ್ಲೋಸ್ ಆಗಲಿದೆ. ಈಗ ಹೊಸ ವಿಮಾನ ನಿಲ್ದಾಣಕ್ಕೆ ಎಂಟೊಂಬತ್ತು ಜಾಗಗಳನ್ನು ನೋಡಿದ್ದಾರೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಐಡೆಕ್ ನವರ ಜೊತೆ ಎಂಬಿಪಿ ಚರ್ಚೆ ಮಾಡಿದ್ದಾರೆ. ಬಾಸ್ಟನ್ ಸಂಸ್ಥೆ ನಮಗೆ ಸಲಹೆ ಕೊಟ್ಟಿದೆ. ಕೇಂದ್ರ, ರಾಜ್ಯ, ಪಬ್ಲಿಕ್ ಷೇರ್ ಮೇಲೆ ಮಾಡಬೇಕಿದೆ. ಟೆಕ್ನಿಕಲ್ ಟೀಂ ನಮಗೆ ವರದಿ ಕೊಟ್ಟಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆ ನಾವು ಮಾತನಾಡಬೇಕು. ಇದು ಪರ್ಸನ್ ಗ್ರೌಂಡ್ ಮೇಲೆ ಮಾಡಲಾಗಲ್ಲ. ಟೆಕ್ನಿಕಲ್ ಗ್ರೌಂಡ್ ಮೇಲೆ ಅವರು ಮಾಡ್ತಾರೆ. ಸಿಎಂ ಜೊತೆ ಚರ್ಚಿಸಿ ಕಳಿಸಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.