ಬೆಳಗಾವಿ : ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಈ ಸಲವು ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದು ಕಾಣಿಕೆಯೂ ಸಹ ಮಹಾಪೂರವಾಗಿ ಹರಿದು ಬಂದಿದೆ. ಗುರುವಾರ ಮತ್ತು ಶುಕ್ರವಾರದಂದು ಭಕ್ತರು ಸಲ್ಲಿಸಿದ್ದ ಕಾಣಿಕೆ ಹುಂಡಿಯನ್ನು ಎಣಿಕೆ ಮಾಡಲಾಗಿದೆ. ಈ ಎಣಿಕೆಯಲ್ಲಿ 5.85 ಲಕ್ಷ ರೂ. ಮೌಲ್ಯದ ಚಿನ್ನ, 1.35 ರೂ.ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ 71.34 ಲಕ್ಷ ರೂ.ನಗದು ಸಂಗ್ರಹವಾಗಿರುವುದು ವಿಶೇಷ.

ಕಾಣಿಕೆ ಹಾಕಲು ಇಟ್ಟಿರುವ ಹುಂಡಿಯಲ್ಲಿ ವಿದೇಶಿ ನೋಟುಗಳು ಪತ್ತೆಯಾಗಿರುವುದು ವಿಶೇಷವಾಗಿದೆ. ಭಾರತದ ನೆರೆಯಲ್ಲಿರುವ ಭೂತಾನ್ ಮತ್ತು ನೇಪಾಳ ದೇಶದ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಾಧಿಕಾರ ರಚಿಸಿದ ನಂತರ ಮೊದಲ ಬಾರಿ ನಡೆದ ಹುಂಡಿ ಎಣಿಕೆ ಇದಾಗಿದೆ. ಸರಕಾರಿ ಅನುದಾನದ ಜೊತೆಗೆ ಭಕ್ತರ ಕಾಣಿಕೆ ಹಣವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಹುದೊಡ್ಡ ಇತಿಹಾಸ ಇದ್ದು, ಈ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವುದು ವಿಶೇಷವಾಗಿದೆ.