Join The Telegram | Join The WhatsApp |
ಬೆಂಗಳೂರು-
ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳ ಬೆಲೆಯಲ್ಲಿ ಭಾರಿ ಏರಿಳಿತ ಆಗುತ್ತಲೇ ಇರುತ್ತದೆ. ಹಾಗೂ ರೈತರ ಕಣ್ಣಿಗೆ ತಣ್ಣೀರೆರಚುವ ಘಟನೆಗಳು ಕೂಡ ನಡೆಯುತ್ತಿರುತ್ತವೆ. ರೈತರಿಗೆ ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ ಕೂಡ ಕೇಳುವವರೇ ಗತಿ ಇಲ್ಲದಂತಾಗಿದೆ. ಹೀಗೆಯೇ ಗದಗದ ಪಾವಡೆಪ್ಪ ಹಳ್ಳಿಕೇರಿ ಎಂಬ ರೈತ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆ.ಜಿ. ಈರುಳ್ಳಿಯನ್ನು ಮಾರಾಟ ಮಾಡಿದ್ದು, ಕೇವಲ 8.36 ರೂಪಾಯಿ ಹಣ ಪಡೆದಿದ್ದಾರೆ. ಹಣ ಪಡೆದಿರುವ ರಶೀದಿ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾರುಕಟ್ಟೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ.
ಇದರಿಂದ ಕಂಗೆಟ್ಟ ರೈತ ತನ್ನ ಉತ್ಪನ್ನಗಳನ್ನು ಬೆಂಗಳೂರಿಗೆ ತರದಂತೆ ಇತರ ರೈತರಿಗೆ ಎಚ್ಚರಿಕೆ ನೀಡಲು ಸಾಮಾಜಿಕ ಜಾಲತಾಣದಲ್ಲಿ ರಶೀದಿಯ ಪೋಸ್ಟ್ ಮಾಡಿದ್ದು, ಇದೀದ ಈ ರಶೀದಿ ವೈರಲ್ ಆಗಿದೆ. ಇದನ್ನು ಖಂಡಿಸಿದ ರೈತಾಪಿ ವರ್ಗದವರು ಕೂಡ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಯಶವಂತಪುರ ಮಾರುಕಟ್ಟೆಯಲ್ಲಿಈರುಳ್ಳಿ ಮಾರಾಟ ಮಾಡಲು ಸುಮಾರು 50 ರೈತರು 415 ಕಿಲೋ ಮೀಟರ್ ದೂರದ ಊರಿನಿಂದ ಬಂದಿದ್ದರು. ಕ್ವಿಂಟಾಲ್ ಈರುಳ್ಳಿಗೆ 500 ರೂಪಾಯಿ ಇದ್ದ ಬೆಲೆ ಏಕಾಏಕಿ 200 ರೂಪಾಯಿಗೆ ಕುಸಿದಿರುವುದು ಆತಂಕಕಾರಿ ವಿಚಾರವಾಗಿದೆ.
ಬಿಲ್ ವಿತರಿಸಿದ ಸಗಟು ವ್ಯಾಪಾರಿ ಈರುಳ್ಳಿಯನ್ನು ಕ್ವಿಂಟಾಲ್ಗೆ 200 ರೂಪಾಯಿ ಎಂದು ಲೆಕ್ಕ ಹಾಕಿದ್ದಾರೆ. ಆದರೆ ಪೋರ್ಟರ್ ಶುಲ್ಕವಾಗಿ 24 ರೂಪಾಯಿ ಸರಕು ಸಾಗಣೆಗೆ 377.64 ರೂಪಾಯಿಗಳನ್ನು ಕಡಿತಗೊಳಿಸಿದೆ. ನಂತರ ಪಾವಡೆಪ್ಪ ಹಳ್ಳಿಕೇರಿ ಅವರಿಗೆ 8.36 ರೂಪಾಯಿ ಮಾತ್ರ ನೀಡಿದ್ದಾರೆ. ಆಕ್ರೋಶಗೊಂಡ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ಸುರಿದ ಮಳೆಯಿಂದ ಗದಗ ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ. ಪುಣೆ ಮತ್ತು ತಮಿಳುನಾಡಿನಿಂದ ತಮ್ಮ ಉತ್ಪನ್ನಗಳನ್ನು ಯಶವಂತಪುರಕ್ಕೆ ತರುವ ರೈತರು ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ. ಆದರೂ ನಮಗೆ ಬೆಲೆ ಇಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ರೈತ ಪಾವಡೆಪ್ಪ ಆತಂಕ ವ್ಯಕ್ತಪಡಿಸಿದರು.
Join The Telegram | Join The WhatsApp |