ಬೆಳಗಾವಿ: ಕಿತ್ತೂರು ಬಳಿಯ ಚನ್ನಾಪುರ ಗ್ರಾಮದಲ್ಲಿ ಗ್ಯಾರೇಜ್ ಹಾಗೂ ಆಟೋಮೊಬೈಲ್ ಅಂಗಡಿ ಕಳ್ಳತನ ಮಾಡಲು ಮೂವರು ಬಂದಿದ್ದರು. ಕೊನೆಗೂ ಅಲ್ಲಿದ್ದ ಜನ ಅವರನ್ನು ಗಮನಿಸಿ ಒಬ್ಬನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿ ಆನಂದನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಆರೋಪಿ. ಇವನ ಜೊತೆ ಬಂದಿದ್ದ ಹಳೆ ಹುಬ್ಬಳ್ಳಿಯ ಇರ್ಫಾನ್ ಅಬ್ದುಲ್ ಬೋದಲೇಖಾನ್ ಮತ್ತು ಕೃಷ್ಣಾಪುರಗಲ್ಲಿಯ ಮಹಮ್ಮದ್ ಹುಸೇನ್ ಅಬ್ದುಲ್ ಸಾಬ್ ನರಗುಂದ ಪರಾರಿಯಾಗಿದ್ದು ಪೊಲೀಸರ ಇವರ ಪತ್ತೆಗೆ ಬಲೆ ಬೀಸಿದ್ದಾರೆ.

ಕಿತ್ತೂರು ತಾಲೂಕು ಚನ್ನಾಪುರ ಗ್ರಾಮದ ಸಮೀವುಲ್ಲಾ ಅಬ್ದುಲ್ ಮುನಾಫ್ ಶೀಗನಳ್ಳಿ ಅವರ ಅಂಗಡಿಯ ಶಟರ್ ಬೀಗ ಮುರಿಯಲು ಇವರು ಪ್ರಯತ್ನಪಟ್ಟಿದ್ದಾರೆ. ಮುರಿಯದೆ ಇದ್ದಾಗ ತಗಡಿನ ಚಾವಡಿ ಮೇಲೆ ಹತ್ತಿ ಒಳನುಗ್ಗಲು ಪ್ರಯತ್ನಪಟ್ಟಿದ್ದಾರೆ. ತಗಡಿನ ಶೀಟ್ ಆದ ಕಾರಣ ಸಪ್ಪಳವಾಗಿದೆ. ಆಗ ಜನ ಹೊರಗೆ ಬಂದು ಗಮನಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಕಳ್ಳರು ಓಡಿಹೋಗಿದ್ದಾರೆ. ಚಾವಣಿ ಮೇಲೆ ಇದ್ದ ಮತ್ತೊಬ್ಬ ಕಳ್ಳನನ್ನು ಜನ ಕೊನೆಗೂ ಧೈರ್ಯ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಫಾರೂಕ್ ಇಸ್ಮಾಯಿಲ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.