ನವದೆಹಲಿ:

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಂಡ್ಯ ಹಾಲಿ ಸಂಸದೆ ಸುಮಲತಾ ಅವರು ಈ ಬಾರಿ ಪ್ರತ್ಯೇಕ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಕುಮಾರಸ್ವಾಮಿ ಮಂಡ್ಯದಿಂದ ಮತ್ತು ಸುಮಲತಾ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ ‌ಭಾನುವಾರ ಇಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಆಗಲಿದ್ದಾರೆ. ಸುಮಲತಾ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂಬ ವದಂತಿ ದಟ್ಟವಾಗಿದೆ.

‘ನಡ್ಡಾ ಅವರ ಆಹ್ವಾನದಂತೆ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಆಗಮಿಸಿದ್ದೇನೆ’ ಎಂದು ಸುಮಲತಾ ಸುದ್ದಿಗಾರರಿಗೆ ತಿಳಿಸಿದರು. ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಕ್ಷೇತ್ರದ ಸಂಸದ, ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಮಾಜಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಅವರು ಸದ್ಯ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದಾರೆ.

ಸುಮಲತಾ ಅವರು 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡಿದ್ದರು. ಪ್ರಸ್ತುತ, ಸೀಟು ಹಂಚಿಕೆ ಸೂತ್ರದಂತೆ ಮಂಡ್ಯ ಕ್ಷೇತ್ರವು ಜೆಡಿ‌ಎಸ್‌ಗೆ ಹೋಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ, ಬಲಿಜ ಸಮುದಾಯದ ಮತಗಳು ಗಣನೀಯವಾಗಿವೆ. ಒಂದು ವೇಳೆ ಬಿಜೆಪಿ ಸುಮಲತಾ ಅವರನ್ನು ಕಣಕ್ಕಿಳಿಸಿದರೆ, ಅವರ ಪರ ಪ್ರಚಾರ ನಡೆಸಲು ಮೈತ್ರಿಪಕ್ಷ ಜೆಡಿಎಸ್‌ನ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಬಿಜೆಪಿ ಮನವಿ ಮಾಡುವ ಸಂಭವವಿದೆ. ಅದೇ ರೀತಿಯ ಸುಮಲತಾ ಅವರಿಗೂ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಮಂಡ್ಯ ಕ್ಷೇತ್ರದಲ್ಲಿ ಪ‍್ರಚಾರ ಮಾಡುವಂತೆಯೂ ಕೋರುವ ಸಾಧ್ಯತೆಗಳಿವೆ.