ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ನೊಂದಣಿ ಸಂಖ್ಯೆ ಹೊಂದಿಲ್ಲದ ದ್ವಿಚಕ್ರ ವಾಹನಗಳನ್ನು ಅಪರಾಧಿಕ ಕೃತ್ಯಗಳಲ್ಲಿ ಬಳಸುತ್ತಿರುವುದನ್ನು ಗಮನಿಸಿ ಬೆಳಗಾವಿ ನಗರದಲ್ಲಿ ನೊಂದಣಿ ಸಂಖ್ಯೆಗಳಿಲ್ಲದ ದ್ವಿಚಕ್ರ ವಾಹನಗಳ ವಿರುದ್ಧ ಈ ದಿವಸ ದಿನಾಂಕ: 18/06/2024 ರಂದು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಕಾರ್ಯಾಚರಣೆಯಲ್ಲಿ ನಗರದಾದ್ಯಂತ ನೊಂದಣಿ ಸಂಖ್ಯೆಗಳಿಲ್ಲದ/ ನೊಂದಣಿ ಸಂಖ್ಯೆ ಮರೆಮಾಚಿದ/ ಮುಂದೆ ಅಥವಾ ಹಿಂದೆ ಯಾವುದಾದರು ಒಂದು ನೊಂದಣಿ ಸಂಖ್ಯೆ ಇಲ್ಲದ ಒಟ್ಟು 344 ದ್ವಿಚಕ್ರ ವಾಹನಗಳನ್ನು ತಡೆಹಿಡಿಯಲಾಗಿರುತ್ತದೆ. ತಡೆಹಿಡಿಯಲಾದ ವಾಹನಗಳಲ್ಲಿ 266 ಸಂಖ್ಯೆಯ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ ದಂಡ ವಿಧಿಸಿ ನೊಂದಣಿ ಸಂಖ್ಯೆಗಳನ್ನು ಅಳವಡಿಸಿದ ನಂತರ ಬಿಡುಗಡೆಗೊಳಿಸಲಾಗಿರುತ್ತದೆ.

ಸಂಶಯಾಸ್ಪದ ಹಿನ್ನಲೆಯಲ್ಲಿ ಇನ್ನುಳಿದ 78 ಸಂಖ್ಯೆಯ ವಾಹನಗಳನ್ನು ತಡೆಹಿಡಿಯಲಾಗಿದ್ದು, ಅವುಗಳ ಬಗ್ಗೆ ಕಾನೂನು ಪ್ರಕ್ರಿಯೆ ಮುಂದುವರಿಸಿದ್ದು ಈ ರೀತಿ ಪರಿಶೀಲಿಸಿದ ವಾಹನಗಳ ಮೇಲೆ ಸಂಚಾರ ನಿರ್ವಹಣೆ ಕೇಂದ್ರದಲ್ಲಿ ಬಾಕಿ ಇರುವ 160 ಪ್ರಕರಣಗಳನ್ನೂ ಸಹ ಇತ್ಯರ್ಥಗೊಳಿಸಲಾಗಿರುತ್ತದೆ.

ಬೆಳಗಾವಿ ನಗರ ಪ್ರದೇಶದಲ್ಲಿ ಇತ್ತೀಚಿಗೆ ವಾಹನಗಳಿಗೆ ದೋಷಪೂರಿತ ಸೈಲನ್ಸ್‌ರ (Defective Silencer) ಗಳನ್ನು ಅಳವಡಿಸುವುದು, ನಿಷ್ಕಾಳಜಿತನದಿಂದ ವಾಹನ ಚಾಲನೆ (Rash and Negligence Driving) ಮಾಡುವುದು. ಹೆಲೈಟ್ ಧರಿಸದೇ ದ್ವೀಚಕ್ರ ವಾಹನ ಸವಾರಿ ( Riding Without Helmet) ಹಾಗೂ ಟ್ರಿಪಲ್ ರೈಡಿಂಗ್ (Triple Riding) ಮಾಡುವುದು ಕಂಡು ಬರುತ್ತಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದು.

 

ಕಾರಣ ಎಲ್ಲ ವಾಹನ ಮಾಲೀಕರು ಎಚ್ಚರವಹಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.