ಟೋಕಿಯೊ: ಟೋಕಿಯೊದ ಪ್ರತಿಷ್ಠಿತ ಟೊಯೊಸು ಮೀನು ಮಾರುಕಟ್ಟೆಯು ವಿಶ್ವದ ಅತಿದೊಡ್ಡ ಸಮುದ್ರಾಹಾರ ಮಾರುಕಟ್ಟೆ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ, ಈ ವರ್ಷದ ಜನವರಿ 5 ರಂದು ತನ್ನ ವಾರ್ಷಿಕ ಹೊಸ ವರ್ಷದ ಹರಾಜಿನಲ್ಲಿ ದೈತ್ಯ ಬ್ಲೂಫಿನ್ ಟ್ಯೂನ ಮೀನುಗಳ ಮಾರಾಟವು ಹೆಡ್‌ಲೈನ್ಸ್‌ ಪಡೆದಿದೆ. ಹರಾಜಿನಲ್ಲಿ ಈ ಮೀನವು ಹತ್ತು ಲಕ್ಷ ಡಾಲರ್‌ಗಳಿಗೆ ಸಮಾನವಾದ ಹಣವನ್ನು ಗಳಿಸಿತು. ಮೈಕೆಲಿನ್-ಸ್ಟಾರ್ಡ್ ಸುಶಿ ರೆಸ್ಟೋರೆಂಟ್‌ಗಳ ಒಡೆತನ ಹೊಂದಿದ ಒನೊಡೆರಾ ಸಮೂಹವು ಹರಾಜಿನಲ್ಲಿ 276-ಕಿಲೋ ಟ್ಯೂನ ಮೀನಿಗೆ 207 ಮಿಲಿಯನ್‌ ಯೆನ್ (ಅಂದಾಜು 11 ಕೋಟಿ ರೂ.) ಪಾವತಿಸಿದೆ. ವರದಿಗಳ ಪ್ರಕಾರ, ಈ ಅಗಾಧವಾದ ಟ್ಯೂನ ಮೀನು ಮೋಟಾರ್ ಬೈಕ್‌ನ ಗಾತ್ರ ಮತ್ತು ತೂಕವನ್ನು ಹೊಂದಿತ್ತು. ಅಮೋರಿಯ ಈಶಾನ್ಯ ಪ್ರಾಂತ್ಯದ ಓಮಾ ಕರಾವಳಿಯಲ್ಲಿ ಮೀನು ಹಿಡಿಯಲಾಗಿದೆ ಎಂದು ಜಪಾನಿನ ಸುದ್ದಿ ಸಂಸ್ಥೆ ಕ್ಯೋಡೊ ವರದಿ ಮಾಡಿದೆ ಎಂದು ಸಿಎನ್‌ಎನ್ ಉಲ್ಲೇಖಿಸಿದೆ.

ಸತತ ಐದು ವರ್ಷಗಳ ಕಾಲ ಈ ವಿಶೇಷ ಹರಾಜಿನಲ್ಲಿ ಸಮೂಹವು ಅಗ್ರ ಬೆಲೆಯನ್ನು ಪಾವತಿಸಿದೆ. 2024 ರಲ್ಲಿ, ಇದು ಅತ್ಯುತ್ತಮ ಟ್ಯೂನ ಮೀನುಗಳಿಗೆ 114 ಮಿಲಿಯನ್ ಯೆನ್ (ಅಂದಾಜು 6 ಕೋಟಿ ರೂ.) ಪಾವತಿಸಿತ್ತು. “ಮೊದಲ ಟ್ಯೂನವು ಅದೃಷ್ಟವನ್ನು ತರುವ ಮೀನು ಎಂಬ ನಂಬುಗೆ ಇದೆ … ಜನರು ಇದನ್ನು ತಿನ್ನುತ್ತಾರೆ ಮತ್ತು ಅದ್ಭುತ ವರ್ಷವನ್ನು ಹೊಂದಲಿ ಎಂಬುದು ನಮ್ಮ ಆಶಯ ಎಂದು ಒನೊಡೆರಾ ಅಧಿಕಾರಿ ಶಿಂಜಿ ನಾಗಾವೊ ಹರಾಜಿನ ನಂತರ ಸುದ್ದಿಗಾರರಿಗೆ ತಿಳಿಸಿದರು.
ಈ ವರ್ಷದ ಹರಾಜಿನ ಬೆಲೆಯು 1999 ರಲ್ಲಿ ಹರಾಜು ಪ್ರಾರಂಭವಾದಾಗಿನಿಂದ ಇದುವರೆಗೆ ಪಾವತಿಸಿದ ಎರಡನೇ ಅತಿ ಹೆಚ್ಚು ಮೊತ್ತ ಎಂದು ಹೇಳಲಾಗುತ್ತಿದೆ. 2019 ರಲ್ಲಿ 278-ಕಿಲೋ ಬ್ಲೂಫಿನ್ ಟ್ಯೂನ ಮೀನಿಗೆ ಕಿಯೋಶಿ ಕಿಮುರಾ (ಜಪಾನಿನ ಜನಪ್ರಿಯ ಸುಶಿ ರೆಸ್ಟೋರೆಂಟ್ ಮಾಲೀಕರು) 333.6m ಯೆನ್ (ಅಂದಾಜು 18 ಕೋಟಿ ರೂ.) ಅತ್ಯಂತ ದುಬಾರಿ ಬೆಲೆಗೆ ಖರೀದಿಸಿತ್ತು.

ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ಬ್ಲೂಫಿನ್ ಟ್ಯೂನ ಮೀನುಗಳ ಅತಿದೊಡ್ಡ ಜಾತಿಯಾಗಿದೆ ಮತ್ತು 40 ವರ್ಷಗಳವರೆಗೆ ಬದುಕಬಲ್ಲದು. ಬ್ಲೂಫಿನ್ ಟ್ಯೂನ ಮೀನುಗಳು ಅಳಿವಿನಂಚಿನಲ್ಲಿರುವವು ಎಂದು ಪರಿಗಣಿಸಲಾಗಿದೆ. ಬ್ಲೂಫಿನ್‌ನಲ್ಲಿ ಮೂರು ಜಾತಿಗಳಿವೆ: ಅಟ್ಲಾಂಟಿಕ್, ಪೆಸಿಫಿಕ್ ಮತ್ತು ದಕ್ಷಿಣ. WWF ಪ್ರಕಾರ, ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ ಅತಿದೊಡ್ಡ ಮತ್ತು ಅತ್ಯಂತ ಅಳಿವಿನಂಚಿನಲ್ಲಿರುವ ಟ್ಯೂನ ಎಂದು ಹೇಳಲಾಗುತ್ತದೆ. ಪಾಕಶಾಲೆಯ ಜಗತ್ತಿನಲ್ಲಿ, ಬ್ಲೂಫಿನ್ ಟ್ಯೂನವನ್ನು ಸುಶಿ ಮತ್ತು ಸಾಶಿಮಿಯಂತಹ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಬ್ಲೂಫಿನ್ ಸಾಮಾನ್ಯವಾಗಿ ಟ್ಯೂನ್ ಮೀನುಗಳ ಅತ್ಯಂತ ದುಬಾರಿ ವರ್ಗವಾಗಿದೆ.