ನವದೆಹಲಿ: ಲೋಕಸಭಾ ಚುನಾವಣೆ, ನಾಲ್ಕು ರಾಜ್ಯಗಳ ವಿಧಾನಸಭೆ ಹಾಗೂ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇಂದಿನಿಂದಲೇ(ಮಾ.16) ನೀತಿ ಸಂಹಿತೆ ಜಾರಿಯಾಗಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭಾ ಚುನಾವಣೆ ದಿನಾಂಕವೂ ಘೋಷಣೆಯಾಗಿದೆ. ಆದರೆ ಕಳೆದ 10 ವರ್ಷದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದಿಲ್ಲ. ನಾಲ್ಕು ರಾಜ್ಯಗಳ ಜೊತೆಗೆ ಜಮ್ಮು ಮತ್ತು ಕಾಶ್ಮೀರ ಚುನಾವಣೆ ಘೋಷಣೆಯಾಗಲಿದೆ ಅನ್ನೋ ಕುತೂಹಲಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಲೋಕಸಭಾ ಚುನಾವಣೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಜೊತೆಯಾಗಿ ನಡೆಸಲು ಹಲವು ಸವಾಲುಗಳಿವೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಕಣಿವೆ ರಾಜ್ಯದಲ್ಲಿ ಭದ್ರತಾ ವಿಚಾರದಲ್ಲಿ ಯಾವುದೇ ಆತಂಕವಿಲ್ಲ. ಆದರೆ ಪ್ರತಿ ಅಭ್ಯರ್ಥಿಗಳಿಗೆ ಭದ್ರತೆ ಅವಶ್ಯಕತೆ ಇದೆ. ಪ್ರತಿ ನಾಗರಿಕರಿಗೂ ಭದ್ರತೆಯ ಅವಶ್ಯತೆ ಇದೆ. ಹೀಗಾಗಿ ಜೊತೆ ಜೊತೆಯಾಗಿ ನಡೆಸುವುದು ಸವಾಲಾಗಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಕಣಿವೆ ರಾಜ್ಯದ ಚುನಾವಣೆ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 24 ಮೀಸಲು ಹಾಗೂ 90 ಸಾಮಾನ್ಯ ಸ್ಥಾನ ಸೇರಿದಂತೆ ಒಟ್ಟು 119 ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದಲ್ಲಿ 10 ರಿಂದ 12 ಅಭ್ಯರ್ಥಿಗಳಿದ್ದಾರೆ. ಒಟ್ಟು 1,000ಕ್ಕೂ ಹೆಚ್ಚು ಅಭ್ಯರ್ಥಿಗಳಾಗಲಿದ್ದಾರೆ. ಸಾವಿರ ಅಭ್ಯರ್ಥಿಗಳಿಗೆ ಭದ್ರತೆ ನೀಡಬೇಕು. ಇದರ ಜೊತೆಗೆ ಲೋಕಸಭಾ ಚುನಾವಣೆ ನಡೆದರೆ ಎಲ್ಲಾ ಅಭ್ಯರ್ಥಿಗಳಿಗೆ ಭದ್ರತೆ ನೀಡುವುದು ಕಷ್ಟವಾಗಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆಯಲಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಸೆಪ್ಟೆಂಬರ್ 30ರೊಳಗೆ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. 2014ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ನಡೆದಿತ್ತು. ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ 2018ರಲ್ಲಿ ಬಿಜೆಪಿ ಬೆಂಬಲ ವಾಪಸ್ ಪಡೆದಿತ್ತು. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿ ಬಂದಿತ್ತು. ಕಳೆದ 6 ವರ್ಷಗಳಿಂದ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಚುನಾವಣೆ ನಡೆಯಲಿದೆ.

18ನೇ ಲೋಕಸಭೆಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಏಪ್ರಿಲ್‌ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ವಿಜಯಪುರ ಕಲಬುರಗಿ ಮತ್ತು ಬೀದರ್‌) ರಂದು ನಡೆಯಲಿದೆ. ಫಲಿತಾಂಶ ಜೂನ್‌ 4ಕ್ಕೆ ಪ್ರಕಟವಾಗಲಿದೆ.