ದೆಹಲಿ : ಈ ವರ್ಷ ಅತ್ಯಂತ ಮಹತ್ವದ ಲೋಕಸಭಾ ಚುನಾವಣೆ ನಡೆಯಲಿದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಹತ್ವದ ಈ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಈ ಬಗ್ಗೆ ಮುಂದಿನ ತಿಂಗಳು ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಲಿದೆ. ಯಾವಾಗ ದಿನಾಂಕ ಘೋಷಣೆ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಚುನಾವಣೆ ಘೋಷಣೆ ನಂತರ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು

ಅಂದಿನಿಂದ ಸರಕಾರ ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗದು.ಭಾರತದ ಚುನಾವಣಾ ಆಯೋಗ ಮಾರ್ಚ್ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.

ಚುನಾವಣಾ ಸಮಿತಿಯ ಉನ್ನತ ಅಧಿಕಾರಿಗಳು ಅಂತಿಮ ಪರಿಶೀಲನೆಗಾಗಿ ಶೀಘ್ರದಲ್ಲಿಯೇ ವಿವಿಧ ರಾಜ್ಯಗಳಿಗೆ ತೆರಳಲಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 9 ರ ನಂತರ ಸಂಸದೀಯ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

2024ರ ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಸಿದ್ಧತೆಗಳನ್ನು ಮುಂದುವರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಅಂತಹ ರಾಜ್ಯಗಳಿಗೆ ಪದೇ ಪದೆ ಭೇಟಿ ನೀಡುತ್ತಿದೆ. ಮೂಲಗಳ ಪ್ರಕಾರ, ಚುನಾವಣಾ ಆಯೋಗದ ಪ್ರತಿನಿಧಿಗಳು ಲೋಕಸಭಾ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬಹುದೇ ಎಂಬುದನ್ನು ಪರಿಶೀಲಿಸಲು ಮಾರ್ಚ್ 12-13ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

2024 ರ ಲೋಕಸಭಾ ಚುನಾವಣೆ 2019 ರ ಲೋಕಸಭಾ ಚುನಾವಣೆಯನ್ನು ನೆನಪಿಸುವಂತಿದೆ. 2019ರ ಮಾರ್ಚ್ 10 ರಂದು ಅಂದಿನ ಚುನಾವಣೆಗೆ ದಿನಾಂಕ ಘೋಷಿಸಲಾಗಿತ್ತು. ಏಪ್ರಿಲ್ 11ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಮತ ಎಣಿಕೆ ನಡೆದಿತ್ತು. 2014 ರ ಲೋಕಸಭಾ ಚುನಾವಣೆ 9 ಹಂತದಲ್ಲಿ ನಡೆದಿತ್ತು. ಈ ಬಾರಿಯ ಚುನಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ.

2019ರ ಲೋಕಸಭಾ ಚುನಾವಣೆ ವೇಳೆ ಸುಮಾರು 90 ಕೋಟಿಯಷ್ಟು ಮಂದಿ ಅರ್ಹ ಮತದಾರರಿದ್ದರು. ಆ ಪೈಕಿ ಸುಮಾರು 1.50 ಕೋಟಿಯಷ್ಟು ಮಂದಿ ಮೊದಲ ಬಾರಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ವಿಶೇಷ ಎಂದರೆ ಈ ಬಾರಿ ಅಧಿಕೃತ ಮತದಾರರ ಸಂಖ್ಯೆ 6 ಕೋಟಿಯಷ್ಟು ಏರಿಕೆ ಕಂಡಿದೆ. ಅಂದರೆ ಅರ್ಹ ಮತದಾರರ ಅಧಿಕೃತ ಸಂಖ್ಯೆ 90 ಕೋಟಿಯಿಂದ 96 ಕೋಟಿಗೆ ತಲುಪಿದೆ.

2019ರ ಫಲಿತಾಂಶ
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಒಟ್ಟು 543 ಸ್ಥಾನಗಳ ಪೈಕಿ 353 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು. ಈ ಪೈಕಿ ಬಿಜೆಪಿ ಮಾತ್ರ 303 ಸ್ಥಾನಗಳಲ್ಲಿ ಜಯಭೇರಿ ಭಾರಿಸಿತ್ತು. ಪ್ರಮುಖ ವಿರೋಧ ಪಕ್ಷವಾದ ಐಎನ್‌ಸಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) 52 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಈ ಬಾರಿ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿ ದಾಖಲೆ ನಿರ್ಮಿಸಲು ಯೋಜನೆ ರೂಪಿಸಿದರೆ ವಿಪಕ್ಷಗಳ ಒಕ್ಕೂಟ ಇಂಡಿಯಾ ಇದಕ್ಕೆ ಅಡ್ಡಗಾಲು ಹಾಕಲು ಪ್ರತಿತಂತ್ರ ರೂಪಿಸುತ್ತಿದೆ. ಒಟ್ಟಾರೆ ಇದೀಗ ಭಾರತೀಯ ಚುನಾವಣಾ ಆಯೋಗ ಯಾವ ದಿನದಂದು ಚುನಾವಣೆ ಘೋಷಣೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.